ADVERTISEMENT

ಅಧಿಕಾರಕ್ಕೆ ಬಂದರೆ ಮರಳು ಲೂಟಿಗೆ ಕಡಿವಾಣ

ಜೆಡಿಎಸ್‌ ಅಭ್ಯರ್ಥಿ ಡಿ.ಯಶೋಧರ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 7:49 IST
Last Updated 31 ಮಾರ್ಚ್ 2018, 7:49 IST

ಹಿರಿಯೂರು: ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್  ಅಧಿಕಾರಕ್ಕೆ ತಂದರೆ   ಮರಳು ನೀತಿ ಜಾರಿಗೆ ತರುತ್ತೇವೆ ಎಂದು ಜೆಡಿಎಸ್ ಅಭ್ಯರ್ಥಿ ಡಿ. ಯಶೋಧರ ಭರವಸೆ ನೀಡಿದರು.ಪಿಟ್ಲಾಲಿ, ರಂಗನಾಥಪುರ, ಎಕೆ ಕಾಲೊನಿ, ಕೋಡಿಹಳ್ಳಿ ಗ್ರಾಮಗಳಲ್ಲಿ ಶುಕ್ರವಾರ ‘ಮನೆ ಮನೆಗೆ ಕುಮಾರಣ್ಣ’ ಕಾರ್ಯಕ್ರಮದ ಪ್ರಚಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೇದಾವತಿ ಮತ್ತು ಸುವರ್ಣಮುಖಿ ನದಿಗಳು ಹರಿಯುತ್ತಿದ್ದರೂ ಬಡವರಿಗೆ ಸಣ್ಣ ಗೂಡು ನಿರ್ಮಿಸಿಕೊಳ್ಳಲು, ಸೋರುವ ಮನೆಯನ್ನು ಸರಿಮಾಡಿಕೊಳ್ಳಲು ಮರಳು ಸಿಗುತ್ತಿಲ್ಲ. ಎರಡೂ ನದಿಗಳ ಒಡಲನ್ನು ಬಗೆದು ಕೆಲವೇ ಕೆಲವು ಮಂದಿ ಶ್ರೀಮಂತರಾಗಿದ್ದು, ಅವರೆಲ್ಲ ಯಾರು ಎಂದು ತಾಲ್ಲೂಕಿನ ಜನತೆಗೆ ತಿಳಿದಿದೆ ಎಂದು ತಿಳಿಸಿದರು.ನದಿಗಳಲ್ಲಿನ ಮರಳು ದೋಚಿದ್ದರಿಂದ ನದೀ ಪ್ರಾಂತ್ಯದಲ್ಲಿ ಅಂತರ್ಜಲ ಕುಸಿದು ಸಾವಿರಾರು ಎಕರೆ ತೆಂಗು, ಅಡಿಕೆ ತೋಟಗಳು ಒಣಗಿ ಹೋಗಿವೆ. ತೋಟ ಕಳೆದುಕೊಂಡಿರುವ ರೈತರ ಶಾಪ ಸಂಬಂಧಿಸಿದವರನ್ನು ತಟ್ಟದೆ ಬಿಡದು ಎಂದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಎಲ್ಲ ರೀತಿಯ ಸಾಲಮನ್ನಾ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಮಾರುಕಟ್ಟೆ ಸೌಲಭ್ಯ. ನೀರಾವರಿಗೆ ಆದ್ಯತೆ. ಸಮರ್ಪಕ ವಿದ್ಯುತ್ ಪೂರೈಕೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು ಎಂದು   ಭರವಸೆ ನೀಡಿದರು.

ಬಿ.ಎಚ್. ಮಂಜುನಾಥ್, ಶಿವಪ್ರಸಾದಗೌಡ, ಎಂ. ಜಯಣ್ಣ, ಎ. ಪಾಂಡುರಂಗ, ಸೈಯದ್ ಸಲಾವುದ್ದೀನ್, ಕಾಶ್ಯಾಮಯ್ಯ, ಕೆ. ಶಂಕರ ಮೂರ್ತಿ, ಕರಿಬಸಣ್ಣ, ಮಸ್ಕಲ್ ಶ್ರೀನಿವಾಸ್, ಕೆ.ಮಂಜುನಾಥ್, ಜಯಶೀಲನಾಯ್ಕ್, ಕೆ.ಎಲ್. ರಾಮಸ್ವಾಮಿ, ಪ್ರವೀಣ್, ಕೋವೇರಟ್ಟಿ ಶಿವಣ್ಣ, ಚಿದಾನಂದ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.