ADVERTISEMENT

ಆಂಜನೇಯಗೆ ಮತಿಭ್ರಮಣೆ: ಸ್ವಾಮೀಜಿ

ಸಚಿವರ ಹೇಳಿಕೆಗೆ ವ್ಯಾಪಕ ಟೀಕೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 5:22 IST
Last Updated 14 ಸೆಪ್ಟೆಂಬರ್ 2013, 5:22 IST

ಚಿತ್ರದುರ್ಗ: ‘ದಲಿತ ಮಠಗಳ ಆಶೀರ್ವಾದದಿಂದ ಚುನಾವಣೆಯಲ್ಲಿ ಗೆದ್ದು ಸಚಿವರಾಗಿರುವ ಎಚ್‌.ಆಂಜನೇಯ ಅವರು, ಆ ಮಠಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವ ವಿಚಾರದಲ್ಲಿ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರದ ಅಮಲಿನಿಂದ ಮತಿಭ್ರಮಣೆಗೆ ಒಳಗಾಗಿ ಅವರು ಈ ರೀತಿ ವರ್ತಿಸುತ್ತಿದ್ದಾರೆ’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಟೀಕಿಸಿದರು.

ನಗರದ ಹೊರವಲಯದಲ್ಲಿರುವ ಭೋವಿ ಗುರುಪೀಠದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಮಠಗಳಿಗೆ ಷರತ್ತುಬದ್ಧ ಅನುದಾನ ಬಿಡುಗಡೆಗೆ ಮಾಡುವ ವಿಚಾರದಲ್ಲಿ, ‘ಸ್ವಾಮೀಜಿಗಳು ಬಂದು ಕೇಳಿದರೆ ಸರಿಪಡಿಸುತ್ತೇನೆ’ ಎಂಬ ಸಚಿವರ ಹೇಳಿಕೆಗೆ ಸ್ವಾಮೀಜಿ ಈ ರೀತಿ ಖಾರವಾಗಿ ಪ್ರತಿಕ್ರಿಯಿಸಿದರು.

‘ದಲಿತ ಮಠಗಳ ಅಭಿವೃದ್ಧಿಗೆ ದಲಿತ ಸಮುದಾಯದಿಂದ ಆರಿಸಿ ಬಂದ ಸಚಿವರೇ ಮುಂದಾಗಬೇಕು. ಅದು ಬಿಟ್ಟು ಸ್ವಾಮೀಜಿಯವರೇ ಕೇಳಬೇಕು ಎನ್ನುವುದು ಸರಿಯಲ್ಲ. ಇಷ್ಟಕ್ಕೂ ಹಿಂದುಳಿದ ವರ್ಗದ ಮಠಗಳು ಕಾಂಗ್ರೆಸ್‌ ಸರ್ಕಾರದ ಹಣವನ್ನೇನು ಕೇಳುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ದಲಿತ ಮಠಗಳ ಅಭಿವೃದ್ಧಿಗೆ ನೀಡಿದ ಅನುದಾನವನ್ನು ಕೇಳುತ್ತಿದ್ದೇವೆ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

‘ಸಮಾಜ ಕಲ್ಯಾಣ ಇಲಾಖೆ ಖಾತೆಯಲ್ಲಿ ದಲಿತ, ಹಿಂದುಳಿದವರ ಬಗ್ಗೆ ಅಭಿಮಾನ ಹಾಗೂ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ವ್ಯಕ್ತಿಗಳು ಸಚಿವರಾಗಿರಬೇಕೇ ವಿನಃ ದಲಿತ ವಿರೋಧಿ ಧೋರಣೆಯಿರುವ ಸಚಿವರು ಅಗತ್ಯವಿಲ್ಲ’ ಎಂದು ಸ್ವಾಮೀಜಿ ಹೇಳಿದರು.

ಷರತ್ತು ರಹಿತ ಅನುದಾನಕ್ಕೆ ಒತ್ತಾಯ
ಚಿತ್ರದುರ್ಗ:
ಸಶಕ್ತವಲ್ಲದ ದಲಿತ ಮಠಗಳಿಗೆ ಅನುದಾನ ಬಿಡುಗಡೆಗೆ ಷರತ್ತುಗಳನ್ನು ವಿಧಿಸಿರುವ
ಸರ್ಕಾರದ ಕ್ರಮ ತೀರಾ ಅಮಾನವೀಯವಾಗಿದೆ ಎಂದು ಹಿರಿಯೂರಿನ ಆದಿಜಾಂಬವ ಮಹಾಸಂಸ್ಥಾನದ ಬಹ್ಮಾನಂದಮುನಿ ಸ್ವಾಮೀಜಿ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಸರ್ಕಾರ ದಲಿತ ಮಠಗಳಿಗೆ ಅನುದಾನ ನೀಡುವ ನೆಪದಲ್ಲಿ ಅನುಕಂಪ ತೋರಿಸಿ ದಲಿತ ಸಮುದಾಯವನ್ನು ಅಭಿವೃದ್ಧಿ ವಂಚಿತರನ್ನಾಗಿ ಮಾಡುತ್ತಿದೆ. ಜಾತ್ಯತೀತ ಸಿದ್ಧಾಂತಕ್ಕೆ ವಿರುದ್ಧವಾದ ಧೋರಣೆಯನ್ನು ಸರ್ಕಾರ ಅನುಸರಿಸುತ್ತಿದೆ. ಇದನ್ನು ವಿರೋಧಿಸಿ ದಲಿತ ಮಠಗಳು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ ಎಂದು ಅವರು ಎಚ್ಚರಿಸಿದರು.

ಆದ್ದರಿಂದ, ಸರ್ಕಾರವು ದಲಿತ ಮಠಗಳಿಗೆ ಮಂಜೂರು ಮಾಡಿರುವ ಅನುದಾನವನ್ನು ಯಾವುದೇ ಷರತ್ತುಗಳಿಲ್ಲದೇ ಬಿಡುಗಡೆ ಮಾಡಿ ದಲಿತ ಹಾಗೂ ಹಿಂದುಳಿದ ಮಠಗಳು ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.