ADVERTISEMENT

ಇಬ್ಬರಿಂದ ಗುದ್ದಲಿಪೂಜೆ; ಗ್ರಾಮಸ್ಥರಿಗೆ ಮನೋರಂಜನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 9:30 IST
Last Updated 19 ಜೂನ್ 2011, 9:30 IST

ಹಿರಿಯೂರು: ತಾಲ್ಲೂಕಿನ ಮಸ್ಕಲ್, ಮಸ್ಕಲ್‌ಮಟ್ಟಿ, ಬ್ಯಾಡರಹಳ್ಳಿ, ಹರಿಯಬ್ಬೆ ಗ್ರಾಮಗಳಲ್ಲಿ ಶನಿವಾರ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅಧಿಕಾರಿಗಳು ಯಾವುದೇ ಆಹ್ವಾನ ಪತ್ರಿಕೆ ಅಚ್ಚು ಹಾಕಿಸದೇ ಇದ್ದರೂ ಇಬ್ಬಿಬ್ಬರು ಶಾಸಕರು ಬೆಂಬಲಿಗರ ಜೊತೆ ಗುದ್ದಲಿ ಪೂಜೆ ನಡೆಸುವ ಮೂಲಕ ಗ್ರಾಮಸ್ಥರಿಗೆ ಪುಕ್ಕಟೆ ಮನೋರಂಜನೆ ದೊರಕಿದರೆ, ಅಧಿಕಾರಿಗಳಿಗೆ ಬೈಗುಳದ ಸುರಿಮಳೆ ಆಯಿತು.

ಮಸ್ಕಲ್ ಗ್ರಾಮದಲ್ಲಿ 2008-09 ನೇ ಸಾಲಿನ ಪರಿಶಿಷ್ಟವರ್ಗದ ಅನುದಾನ ಯೋಜನೆಯಡಿ ರೂ.25 ಲಕ್ಷ  ವೆಚ್ಚದ ರಸ್ತೆ ಕಾಮಗಾರಿಗೆ ಗ್ರಾಮಕ್ಕೆ ಮುಂಚೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸಿದರು.

ಭೂಸೇನಾ ನಿಗಮದ ಎಂಜಿನಿಯರ್ ಒಬ್ಬರಿಗೆ ದೂರವಾಣಿ ಮೂಲಕ ತೀವ್ರ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡ ರೆಡ್ಡಿಯವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ, ತಾಲ್ಲೂಕು, ಗ್ರಾ.ಪಂ. ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಮಾಡುವಂತೆ ನಿಮಗೆ ಹೇಳಿದ್ದು ಯಾರು? ಈ ಬಗ್ಗೆ ಪರಿಷತ್‌ನಲ್ಲಿ ಹಕ್ಕುಚ್ಯುತಿ ಪ್ರಶ್ನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ, ಮಸ್ಕಲ್‌ಮಟ್ಟಿ ಗ್ರಾಮಕ್ಕೆ ತೆರಳಿದ ಶಾಸಕರು ರೂ.1.37 ಕೋಟಿ  ವೆಚ್ಚದ ಸುವರ್ಣಗ್ರಾಮ ಯೋಜನೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಅಲ್ಲಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡ ರೆಡ್ಡಿಯವರು, ಮೂರು ದಶಕದಿಂದ ರಾಜಕೀಯದಲ್ಲಿದ್ದೇನೆ. ಆಹ್ವಾನ ಪತ್ರಿಕೆ ಅಚ್ಚು ಹಾಕಿಸದೆ, ಕಾಮಗಾರಿ ಪರಿಶೀಲನೆ ನೆಪದಲ್ಲಿ ಉದ್ಘಾಟನೆ, ಶಂಕುಸ್ಥಾಪನೆ ಮಾಡುವುದರ ಹಿಂದೆ ಯಾರ ಕೈವಾಡ ಇದೆ ಎಂದು ಗೊತ್ತು.ಈ ರೀತಿಯ ರಾಜಕೀಯವನ್ನು ನಾನು ಎಂದೂ ಮಾಡಿಲ್ಲ ಎಂದು ಪರೋಕ್ಷವಾಗಿ ಡಿ. ಸುಧಾಕರ್ ಬಗ್ಗೆ ಟೀಕೆ ಮಾಡಿದರು.

ತಿಪ್ಪಾರೆಡ್ಡಿ ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದಾಗ ಸ್ಥಳದಲ್ಲಿದ್ದ ಗ್ರಾಮದ ಕೆಲವು ಮುಖಂಡರು ತಮಗೆ ರಾಜಕೀಯಕ್ಕಿಂತ ಗ್ರಾಮದ ಅಭಿವೃದ್ಧಿ ಮುಖ್ಯ ಎಂದು ಸ್ಪಷ್ಟಪಡಿಸಿದರು.

ಶಾಸಕ ಡಿ. ಸುಧಾಕರ್ ಅವರು ಮಧ್ಯಾಹ್ನದ ನಂತರ ಮಲ್ಲೇಣು ಗ್ರಾಮದಲ್ಲಿ ರೂ.5 ಲಕ್ಷ  ವೆಚ್ಚದಲ್ಲಿ ಉಡುಸಲಮ್ಮ ದೇಗುಲಕ್ಕೆ, ಮಸ್ಕಲ್‌ಮಟ್ಟಿ ಗ್ರಾಮದಲ್ಲಿ  ರೂ.137 ಲಕ್ಷ ವೆಚ್ಚದ ಸುವರ್ಣಗ್ರಾಮ ಯೋಜನೆಗೆ, ಮಸ್ಕಲ್ ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿ ರೂ.25 ಲಕ್ಷ ವೆಚ್ಚದ ಕಾಂಕ್ರಿಟ್‌ರಸ್ತೆ ಕಾಮಗಾರಿಗೆ, ಬ್ಯಾಡರಹಳ್ಳಿಯಲ್ಲಿ ರೂ.71 ಲಕ್ಷ  ವೆಚ್ಚದ ಸುವರ್ಣಗ್ರಾಮ ಮತ್ತು  ರೂ.5 ಲಕ್ಷ ವೆಚ್ಚದಲ್ಲಿ ಗಣೇಶ ದೇಗುಲದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಧರ್ಮಪುರ ಹೋಬಳಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ತೆರಳಿದರು.

ಜಿ.ಪಂ. ಸದಸ್ಯರಾದ ಚಂದ್ರಪ್ಪ, ದ್ಯಾಮಣ್ಣ, ಅನುರಾಧಾ, ಹನುಮಂತರಾಯ, ಬಿ.ವಿ. ಮಾಧವ, ನಾಗೇಂದ್ರನಾಯ್ಕ, ತಿಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.