ADVERTISEMENT

ಉನ್ನತ ಸಾಧನೆಗೆ ಶ್ರಮಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 3 ಮೇ 2011, 8:00 IST
Last Updated 3 ಮೇ 2011, 8:00 IST

ಹಿರಿಯೂರು: ನಿರಂತರ ಅಧ್ಯಯನ, ಸ್ಪಷ್ಟ ಗುರಿ, ತರಬೇತುದಾರರು ನೀಡುವ ತರಬೇತಿಯಲ್ಲಿ ಪ್ರಾಮಾಣಿಕವಾಗಿ ಪಾಲ್ಗೊಳ್ಳುವ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದು ತಾ.ಪಂ. ಸದಸ್ಯ ಮಹಮದ್ ಫಕೃದ್ದೀನ್ ಕರೆ ನೀಡಿದರು.

ನಗರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಈಚೆಗೆ ಬೆಂಗಳೂರಿನ ಎಸ್‌ಇಎ ಶಿಕ್ಷಣ ಸಂಸ್ಥೆ ಮತ್ತು ನಗರದ ಸಿದ್ದೇಶ್ವರ ಟ್ರಾನ್ಸ್‌ಪೋರ್ಟ್ಸ್ ವತಿಯಿಂದ ಪ್ರಥಮ ಮತ್ತು ದ್ವಿತೀಯದರ್ಜೆ ಸಹಾಯಕರ ಹಾಗೂ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಮ್ಮಿಕೊಂಡಿದ್ದ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪರೀಕ್ಷಾ ಸಮಯ ಸಮೀಪಿಸಿದಾಗ ಬಹಳಷ್ಟು ವಿದ್ಯಾರ್ಥಿಗಳು ಧೈರ್ಯ ಕಳೆದುಕೊಳ್ಳುವುದುಂಟು. ಓದಿನ ಆರಂಭದಿಂದಲೇ ಸೂಕ್ತ ಸಿದ್ಧತೆ ಮಾಡಿಕೊಂಡರೆ, ಅಂತಹ ಭಯದಿಂದ ದೂರ ಉಳಿಯಬಹುದು.ಪತ್ರಿಕೆಗಳನ್ನು ಓದುವ ಮೂಲಕ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಪದಗಳ ಸ್ಪಷ್ಟ ಗ್ರಹಿಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಪ್ರಥಮ ಹಾಗೂ ದ್ವಿತೀಯದರ್ಜೆ ಸಹಾಯಕರ ಹುದ್ದೆಗಳಿಗೆ ಆಯ್ಕೆ ಬಯಸುವ ಬಹುತೇಕರು ಬಡ ಹಾಗೂ ಮಧ್ಯಮ ವರ್ಗದಿಂದ ಬಂದವರಾಗಿರುತ್ತಾರೆ. ತಮ್ಮ ಕುಟುಂಬದ ಹಿನ್ನೆಲೆ ಅರ್ಥ ಮಾಡಿಕೊಂಡು, ಸಂಕೋಲೆಯಿಂದ ಬಿಡುಗಡೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಆಯ್ಕೆ ಕಷ್ಟವಲ್ಲ ಎಂದು ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಟಿ. ಚಂದ್ರಶೇಖರಯ್ಯ ತಿಳಿಸಿದರು.

ಬೆಂಗಳೂರಿನ ಎಸ್‌ಇಎ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಟಿ. ಶ್ರೀನಿವಾಸ್, ಉಪನ್ಯಾಸಕ ಹುಸೇನ್ ಸಾಬ್, ಕೆ.ಎಂ. ಶಿವಮೂರ್ತಿ, ರಮೇಶ್ ಮಾತನಾಡಿದರು. ಉದ್ಯಮಿ ವಿಶ್ವನಾಥ್, ದಯಾನಂದ್, ನಟರಾಜ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು. ಟಿ. ವೀರಕರಿಯಪ್ಪ ಸ್ವಾಗತಿಸಿದರು. ಚಮನ್ ಷರೀಫ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.