ADVERTISEMENT

ಉಬ್ಬು ನಿರ್ಮಿಸಿ ಅಪಘಾತ ತಪ್ಪಿಸಿ

ಚಂದ್ರವಳ್ಳಿಗೆ ಪ್ರತಿನಿತ್ಯ ಹೋಗುವ ವಾಯುವಿಹಾರಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 11:03 IST
Last Updated 18 ಜೂನ್ 2018, 11:03 IST
ಚಿತ್ರದುರ್ಗದ ಚಂದ್ರವಳ್ಳಿಗೆ ಹೋಗುವ ರಸ್ತೆಯಲ್ಲಿ ಈಚೆಗೆ ಅಪಘಾತಕ್ಕೀಡಾಗಿರುವ ಕಾರು.
ಚಿತ್ರದುರ್ಗದ ಚಂದ್ರವಳ್ಳಿಗೆ ಹೋಗುವ ರಸ್ತೆಯಲ್ಲಿ ಈಚೆಗೆ ಅಪಘಾತಕ್ಕೀಡಾಗಿರುವ ಕಾರು.   

ಚಿತ್ರದುರ್ಗ: ಐತಿಹಾಸಿಕ ಚಂದ್ರವಳ್ಳಿಗೆ ಹೋಗುವ ರಸ್ತೆಯಲ್ಲಿ ಸಂಚರಿಸಲು ಕೆಲವೊಮ್ಮೆ ಭಯ ಪಡುವಂತಾಗಿದೆ. ಕಿರಿದಾದ ರಸ್ತೆಯಲ್ಲಿ ವೇಗವಾಗಿ ಬರುವ ವಾಹನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾದರೆ ಯಾರು ಹೊಣೆ? ಹೀಗಾಗಿ ‘ಉಬ್ಬು ನಿರ್ಮಿಸಿ, ಅಪಘಾತ ತಪ್ಪಿಸಿ’ ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಕೆಲ ದ್ವಿಚಕ್ರ, ಕಾರು ಸವಾರರು ವೇಗವಾಗಿ ಚಂದ್ರವಳ್ಳಿ ರಸ್ತೆಯಲ್ಲಿ ಸಂಚರಿಸುತ್ತಾರೆ. ಮುಂದಿನ ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿ ಕೆಲವೊಮ್ಮೆ ಅಪಘಾತಗಳು ಸಂಭವಿಸಿವೆ. ಎಲ್ಲಿ ತಮಗೆ ಡಿಕ್ಕಿ ಹೊಡೆಯುತ್ತವೆಯೋ, ಇಲ್ಲವೇ ವಾಹನ ಸವಾರರು ತಮಗೆ ತಾವೇ ಅಪಾಯ ತಂದುಕೊಳ್ಳುತ್ತಾರೋ ಎಂಬ ಆತಂಕ ವಾಯುವಿಹಾರಿಗಳು ಹಾಗೂ ಪಾದಚಾರಿಗಳನ್ನು ಕಾಡುತ್ತಿದೆ.

‘ನಿತ್ಯ ಬೆಳಿಗ್ಗೆ ಹಾಗೂ ಸಂಜೆ ವೃದ್ಧರು, ಮಹಿಳೆಯರು, ಪುಟಾಣಿ ಮಕ್ಕಳು ಸೇರಿ 500ಕ್ಕೂ ಹೆಚ್ಚು ಮಂದಿ ವಾಯುವಿಹಾರಕ್ಕೆ ಹೋಗುತ್ತಾರೆ. ಆರೋಗ್ಯದ ದೃಷ್ಟಿಯಿಂದ ರಾತ್ರಿ 9 ಆದರೂ ಚಂದ್ರವಳ್ಳಿ ರಸ್ತೆ ಮಾರ್ಗದಲ್ಲಿ ಕೆಲವರು ಸಂಚರಿಸುತ್ತಾರೆ. ನಗರಸಭೆಯಿಂದ ರಸ್ತೆಯ ಪಕ್ಕದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಕೆಲವು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳನ್ನು ಶೀಘ್ರವಾಗಿ ದುರಸ್ತಿ ಮಾಡಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಡಾ. ಚನ್ನಕೇಶವ.

ADVERTISEMENT

ಚಂದ್ರವಳ್ಳಿ ಕೋಟೆನಾಡಿನ ಪ್ರವಾಸಿ ತಾಣಗಳಲ್ಲೊಂದು. ಇಲ್ಲಿಗೆ ಅಕ್ಕಪಕ್ಕದ ಜಿಲ್ಲೆಯವರೂ ಸೇರಿ ರಾಜ್ಯದ ವಿವಿಧ ಊರುಗಳಿಂದ ರಜೆ ದಿನಗಳಲ್ಲಿ ಪ್ರವಾಸಿಗರು ಬರುತ್ತಾರೆ. ಸ್ಥಳೀಯರೂ ಪ್ರತಿ ವಾರ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಬರುತ್ತಾರೆ. ಅದರಲ್ಲೂ ಯುವಕ–ಯುವತಿಯರೇ ಹೆಚ್ಚು. ವೇಗವಾಗಿ ವಾಹನ ಚಲಾಯಿಸಿಕೊಂಡು ಹೋದಾಗ ಹಿರಿಯ ನಾಗರಿಕರಿಗೆ ನಡುಕ ಶುರುವಾಗುತ್ತದೆ ಎನ್ನುತ್ತಾರೆ ಸ್ಥಳೀಯರಾದ ಕೃಷ್ಣಪ್ಪ.

ಕೆಲವೊಮ್ಮೆ ವಾಯುವಿಹಾರಿಗಳಿಗೆ ಪೆಟ್ಟು ಕೂಡ ಬಿದ್ದಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ, ಹದಿಹರೆಯದ ವಯಸ್ಸಿನಲ್ಲಿ ಹುಡುಗಾಟ ಮಾಡಲು ಹೋಗಿ ಯುವಸಮೂಹ ತೊಂದರೆಗೆ ಸಿಲುಕಬಾರದು. ಹೀಗಾಗಿ ರಸ್ತೆ ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ ಅವರು.

ಕನಕ ವೃತ್ತ, ಬುರುಜನಹಟ್ಟಿ, ಗಾಂಧಿವೃತ್ತ, ನೆಹರೂ ನಗರ, ಧವಳಗಿರಿ ಬಡಾವಣೆ, ಬಿವಿಕೆಎಸ್ ಲೇಔಟ್‌ನ ಅನೇಕರು ಪ್ರತಿನಿತ್ಯವೂ ಚಂದ್ರವಳ್ಳಿಗೆ ಬರುತ್ತಾರೆ.

‘ಕೆಲ ಯುವಕರು ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತ ತುಂಬಾ ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ರಸ್ತೆಯಲ್ಲಿ ಓಡಾಡಲು ತೊಂದರೆಯಾಗುತ್ತಿದೆ. ಹೀಗಾಗಿ ಮಾರ್ಗದುದ್ದಕ್ಕೂ ಅಲ್ಲಲ್ಲಿ ಉಬ್ಬು ಅಳವಡಿಸಿದರೆ ವಾಹನದ ವೇಗವನ್ನು ನಿಯಂತ್ರಿಸಬಹುದು’ ಎನ್ನುತ್ತಾರೆ ಯಲ್ಲಪ್ಪ ರೆಡ್ಡಿ.

ಮೂರು ದಿನದ ಹಿಂದಷ್ಟೇ ಅಪಘಾತ

ರಸ್ತೆ ಮಾರ್ಗದಲ್ಲಿ ಆಗಿಂದಾಗ್ಗೆ ಅಪಘಾತ ಸಂಭವಿಸುತ್ತವೆ. ಮೂರು ದಿನಗಳ ಹಿಂದೆ ವಾಹನವೊಂದು ಅಪಘಾತಕ್ಕೀಡಾಗಿ ಅದರೊಳಗಿದ್ದ ಕೆಲವರಿಗೆ ಗಾಯಗಳಾಗಿವೆ. ಜ್ಞಾನಭಾರತಿ ಶಾಲೆಯಿಂದ ಚಂದ್ರವಳ್ಳಿಗೆ ಸುಮಾರು ಒಂದು ಕಿಲೋ ಮೀಟರ್ ದೂರವಾಗಲಿದೆ. ಈ ರಸ್ತೆಯುದ್ದಕ್ಕೂ ಅಲ್ಲಲ್ಲಿ ‘ಹಂಪ್ಸ್‌ ನಿರ್ಮಿಸಿ ಅಪಘಾತ ತಪ್ಪಿಸಿ’ ಎನ್ನುತ್ತಾರೆ ಬುರುಜನಹಟ್ಟಿ ನಿವಾಸಿ ಎಸ್‌.ಎಂ.ಎಲ್‌. ರಾಜು.

ಚಂದ್ರವಳ್ಳಿ ಕಿರಿದಾದ ರಸ್ತೆಯಲ್ಲಿ ಎಲ್ಲಿಯೂ ಉಬ್ಬು (ಹಂಪ್ಸ್‌) ಅಳವಡಿಸದೇ ಇರುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ
 – ಯಲ್ಲಪ್ಪ ರೆಡ್ಡಿ, ನಾಗರಿಕ, ನೆಹರೂನಗರ 
      

ಬೋರೇಶ ಎಂ.ಜೆ. ಬಚ್ಚಬೋರನಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.