ADVERTISEMENT

ಉಳ್ಳಾರ್ತಿ ಕಾವಲ್ ಉಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 10:05 IST
Last Updated 11 ಅಕ್ಟೋಬರ್ 2011, 10:05 IST

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕು ಉಳ್ಳಾರ್ತಿ ಕಾವಲ್ ಹಾಗೂ ಕುದಾಪುರ ಕುರಿ ಫಾರಂ ಜಮೀನನ್ನು ಕುರಿ, ಮೇಕೆ, ಜಾನುವಾರು ಮೇಯಿಸಲು ಉಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್‌ಸಭಾ ಚಳ್ಳಕೆರೆ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಯೂನಿಯನ್‌ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಘೋಷಣೆಗಳನ್ನು ಹಾಕಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಎಐಕೆಎಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕರಿಯಣ್ಣ ಮಾತನಾಡಿ, ಉಳ್ಳಾರ್ತಿ ಕಾವಲ್ ರಿ.ಸ.ನಂ. 01ರಲ್ಲಿರುವ 2,143 ಎಕರೆ ಸರ್ಕಾರಿ ಜಮೀನು ಅಮೃತ್‌ಮಹಲ್‌ಗೆ ಸೇರಿದೆ.

ಇದರಲ್ಲಿ 150 ಎಕರೆ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು, 150 ಎಕರೆ ಮೊರಾರ್ಜಿ ದೇಸಾಯಿ, ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ, ದೊಡ್ಡ ಉಳ್ಳಾರ್ತಿಗೆ ಕುಡಿಯುವ ನೀರು ಮತ್ತು ಗೋಶಾಲೆಗೆ 200 ಎಕರೆ ಜಮೀನು ಸೇರಿದಂತೆ ಒಟ್ಟು 500 ಎಕರೆ ಜಮೀನನ್ನು ದೊಡ್ಡ ಉಳ್ಳಾರ್ತಿ ಗ್ರಾಮಪಂಚಾಯ್ತಿಗೆ ಬಿಟ್ಟುಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕಿಸಾನ್‌ಸಭಾದ ಮುಖಂಡರಾದ ಎಂ. ಹನುಮಂತರೆಡ್ಡಿ, ಸಿ.ವೈ. ಶಿವರುದ್ರಪ್ಪ, ಎಂ.ಸಿ. ವೆಂಕಟರಾಮು ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.