ADVERTISEMENT

ಒಡಲು ಬಗೆದರೂ ಹನಿ ನೀರಿಗೂ ಹಾಹಾಕಾರ

ತೋಟಗಾರಿಕಾ ಬೆಳೆ ಉಳಿಸಿಕೊಳ್ಳಲು ಅನ್ನದಾತರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2014, 6:47 IST
Last Updated 19 ಫೆಬ್ರುವರಿ 2014, 6:47 IST
ಹೊಸದುರ್ಗ ತಾಲ್ಲೂಕಿನಲ್ಲಿ ಸಮೃದ್ಧ ಮಳೆಯಾಗದ ಕಾರಣ ತಾಲ್ಲೂಕಿನ ಅನೇಕ ಭಾಗಗಳಲ್ಲಿ ಅಂತರ್ಜಲ ಮಟ್ಟ ಬರಿದಾಗಿದ್ದು 900 ಅಡಿ ಆಳಕ್ಕೆ ಬೋರ್‌ವೆಲ್‌ ಕೊರೆಸಿದರೂ ಸಹ ನೀರಿಲ್ಲದೇ ಬರಿ ದೂಳು ಹೊರಬರುತ್ತಿರುವ ದೃಶ್ಯ
ಹೊಸದುರ್ಗ ತಾಲ್ಲೂಕಿನಲ್ಲಿ ಸಮೃದ್ಧ ಮಳೆಯಾಗದ ಕಾರಣ ತಾಲ್ಲೂಕಿನ ಅನೇಕ ಭಾಗಗಳಲ್ಲಿ ಅಂತರ್ಜಲ ಮಟ್ಟ ಬರಿದಾಗಿದ್ದು 900 ಅಡಿ ಆಳಕ್ಕೆ ಬೋರ್‌ವೆಲ್‌ ಕೊರೆಸಿದರೂ ಸಹ ನೀರಿಲ್ಲದೇ ಬರಿ ದೂಳು ಹೊರಬರುತ್ತಿರುವ ದೃಶ್ಯ   

ಹೊಸದುರ್ಗ: ತಾಲ್ಲೂಕಿನೆಲ್ಲೆಡೆ ಅಂತರ್ಜಲ ಮಟ್ಟ ಕುಸಿತವಾಗಿರುವುದರಿಂದ ಲಕ್ಷಾಂತರ  ರೂಪಾಯಿ ಖರ್ಚು ಮಾಡಿ ಬೆಳೆದಿರುವ ತೋಟಗಾರಿಕಾ ಬೆಳೆಗಳನ್ನು ಉಳಿಸಿಕೊಳ್ಳಲು ಅನ್ನದಾತ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪರಿಸ್ಥಿತಿ ಹೀಗಿದ್ದರೂ ಸಹ ದಾಳಿಂಬೆ ಬೆಳೆಯಲು ಬೋರ್‌ವೆಲ್‌ ಹಾಕಿಸುವವರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಾಲ್ಲೂಕಿನೆಲ್ಲೆಡೆ ಹತ್ತಾರು ಬೋರ್‌ವೆಲ್‌್ ಲಾರಿಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ.

ಕೆಲವೆಡೆ ಸುಮಾರು 800 ಅಡಿ ವರೆಗೆ ಬೋರ್‌ವೆಲ್‌ ಕೊರೆಸಿದರೂ ಸಹ ನೀರು ಸಿಗದೇ, ಬರೀ ದೂಳು ಸಿಗುತ್ತಿದೆ ಎನ್ನುತ್ತಾರೆ ರೈತ ತಿಪ್ಪೇಶ್‌.

ಅಂತರ್ಜಲಮಟ್ಟ ಬರಿದಾಗುತ್ತಿದ್ದು, ತಾಲ್ಲೂಕಿನ ಸಣ್ಣಕಿಟ್ಟದಹಳ್ಳಿ, ಕೆಂಕೆರೆ, ನಾಕಿಕೆರೆ, ಹೊಸಹಟ್ಟಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗುತ್ತಿವೆ.  ಕೆರೆಕಟ್ಟೆಗಳಲ್ಲಿ ನೀರಿಲ್ಲದೆ ಬಳ್ಳಾರಿ ಜಾಲಿ ಸಮೃದ್ಧವಾಗಿ ಬೆಳೆಯುತ್ತಿದೆ. ಇದರಿಂದ ಮುಂದೆ ಭೀಕರ ಜಲಕ್ಷಾಮ ಸಂಭವಿಸುತ್ತ ದೆಯೋ ಎಂಬ ಭೀತಿ ಜನರನ್ನು ಕಾಡುತ್ತಿದೆ ಎನ್ನುತ್ತಾರೆ ಕಾರೇಹಳ್ಳಿ ರೈತ ಯತೀಶ್‌.

ತಾಲ್ಲೂಕಿನಲ್ಲಿ ಪ್ರಕೃತಿಯ ವಿಕೋಪದಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆ ಬೀಳುವ ಪ್ರಮಾಣ ಕಡಿಮೆಯಾಗುತ್ತಿದೆ. ತಾಲ್ಲೂಕಿನ ಜೀವನಾಡಿ ವೇದಾವತಿ ನದಿ ಪಾತ್ರದಲ್ಲಿ ನೀರಿಲ್ಲ. ಪರಿಣಾಮ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ.

ನೀರು ಪೂರೈಸುತ್ತಿದ್ದ ಕೆಲವು ಕೊಳವೆ ಬಾವಿಗಳು ಬತ್ತಿಹೋಗಿವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಜನಜಾನುವಾರುಗಳು ನೀರಿಗಾಗಿ ಹಾಹಾಕಾರ ಪಡುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಾರೆ ಪುರಸಭಾ ಸದಸ್ಯ ನಾಗರಾಜ್‌ ದಿವಾಕರ್‌.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿರುವ ವಿವಿಧ ತೋಟಗಾರಿಕಾ ಬೆಳೆಗಳು ನೀರಿಲ್ಲದೆ ಒಣಗುತ್ತಿದ್ದು, ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲವನ್ನು ಹೇಗೆ ತೀರಿಸುವುದು ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಅಲ್ಪಮಟ್ಟಿಗೆ ತಾಲ್ಲೂಕಿನ ಅಂತರ್ಜಲ ಮಟ್ಟ ಹೆಚ್ಚಾಗಬೇಕಾದರೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಸರ್ಕಾರ ತ್ವರಿತವಾಗಿ ಪೂರ್ಣಗೊಳಿಸಿ,  ರೈತರ ಹಿತಕಾಪಾಡಬೇಕು ಎನ್ನುತ್ತಾರೆ ಪ್ರಗತಿಪರ ರೈತ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯ ಎಲ್‌.ಬಿ.ಮಹೇಶ್ವರಪ್ಪ.

ಅಧಿಕಾರಿ ಪ್ರತಿಕ್ರಿಯೆ: ಸುಮಾರು 10 ವರ್ಷಗಳಿಂದ ಹೊಸದುರ್ಗ ತಾಲ್ಲೂಕಿನಲ್ಲಿ ಸಮೃದ್ಧ ಮಳೆ ಬಂದಿಲ್ಲ. ಜತೆಗೆ 6 ವರ್ಷಗಳಿಂದ ತಾಲ್ಲೂಕು ಬರಗಾಲಕ್ಕೆ ತುತ್ತಾಗಿದೆ. ಯಾವುದೇ ನದಿ, ಕಾಲುವೆಗಳಿಂದ ನೀರು ಪೂರೈಕೆ ಆಗುತ್ತಿಲ್ಲ.

ಇದರಿಂದ ಅಂತರ್ಜಲ ಮಟ್ಟ ಕುಸಿದಿದೆ. ಹೀಗಿದ್ದರೂ ಸಹ ರೈತರು ದಾಳಿಂಬೆ ಬೆಳೆಯಲು ಮುಂದಾಗಿರುವುದರಿಂದ ನಿರಂತರವಾಗಿ ಬೋರ್‌ವೆಲ್‌ ಕೊರೆಸುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಅಪಾರ ಹಾನಿಯಾಗುವ ಸಂಭವವಿದೆ ಎನ್ನುತ್ತಾರೆ ಪಟ್ಟಣದ ತೋಟಗಾರಿಕೆ ಇಲಾಖೆ ಅಧಿಕಾರಿ ಎನ್‌.ಕುಮಾರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.