ADVERTISEMENT

ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 6:45 IST
Last Updated 17 ಮಾರ್ಚ್ 2012, 6:45 IST

ಚಿತ್ರದುರ್ಗ: ಗ್ರಾಮೀಣ ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ಮತ್ತು ಸೇವಾ ಭದ್ರತೆ ಒದಗಿಸುವಂತೆ ಆಗ್ರಹಿಸಿ ನಗರದಲ್ಲಿ ಶುಕ್ರವಾರ ಅಂಗವಿಕಲರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯದ ಅಂಗವಿಕಲ ವಿವಿಧೋದ್ದೇಶ ಹಾಗೂ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಜಿಲ್ಲಾ ಶಾಖೆ ವತಿಯಿಂದ ಈ ಪ್ರತಿಭಟನೆ ನಡೆಯಿತು.
2007-08ನೇ ಸಾಲಿನಲ್ಲಿ ಗ್ರಾಮೀಣ ಅಂಗವಿಕಲರ ಪುನರ್ವಸತಿ ಯೋಜನೆ ಅಡಿಯಲ್ಲಿ ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ರಾಜ್ಯದ 5628 ಗ್ರಾಮ ಪಂಚಾಯ್ತಿಗಳಿಗೆ ಮತ್ತು 176 ತಾಲ್ಲೂಕು ಪಂಚಾಯ್ತಿಗಳಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾಭ್ಯಾಸ ಮುಗಿಸಿದ ಅಂಗವಿಕಲರನ್ನು ಗೌರವಧನ ಆಧಾರದ ಮೇಲೆ ನೇಮಿಸಲಾಯಿತು.

ಅಂಗವಿಕಲರ ಮನೆ ಬಾಗಿಲಿಗೆ ಸರ್ಕಾರಿ ತಲುಪಿಸುವ ಉದ್ದೇಶದಿಂದ ಈ ಅಂಗವಿಕಲರನ್ನು ನೇಮಿಸಲಾಗಿತ್ತು. ಗ್ರಾ.ಪಂ. ಕಾರ್ಯಕರ್ತರಿಗೆ ರೂ.700 ಮತ್ತು ತಾ.ಪಂ. ಕಾರ್ಯಕರ್ತರಿಗೆ ರೂ.1800 ಮಾಸಿಕ ಗೌರವ ಧನ ನೀಡಲಾಗುತ್ತಿದೆ. ಈ ಅಲ್ಪಮೊತ್ತದಲ್ಲಿ ಬದುಕುವುದು ಕಷ್ಟವಾಗುತ್ತಿದೆ ಎಂದು ದೂರಿದರು.

ಕಳೆದ 4 ವರ್ಷಗಳಿಂದ ಕನಿಷ್ಠ ವೇತನವನ್ನು ಜಾರಿಗೊಳಿಸಿಲ್ಲ. ಈಗ ದೊರೆಯುತ್ತಿರುವ ಗೌರವಧನದಲ್ಲಿ ಬದುಕು ಸಾಗಿಸುವುದು ಕಷ್ಟಕರ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ  ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಎಂದು ದೂರಿದರು.

ಸರ್ಕಾರ ತಮಗೆ ಕನಿಷ್ಠ ವೇತನ ಜಾರಿಗೊಳಿಸಿ ಸೇವಾ ಭದ್ರತೆ ಒದಗಿಸಬೇಕು ಮತ್ತು ಆರೋಗ್ಯ ಮತ್ತು ಜೀವ ವಿಮೆ ಕಲ್ಪಿಸಬೇಕು ಎಂದು ಬೇಡಿಕೆಗಳನ್ನು ಮಂಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ದಾದಾಪೀರ್, ಉಪಾಧ್ಯಕ್ಷ ಎನ್. ಮೈಲಾರಪ್ಪ, ಖಜಾಂಚಿ ಎನ್. ಹನುಮಂತಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ.ಕೆ. ವೆಂಕಟೇಶ್, ಜಿಲ್ಲಾ ಕಾರ್ಯದರ್ಶಿ ಡಿ. ಅಜ್ಜಪ್ಪ ಮತ್ತಿತರರು ಹಾಜರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.