ಶಿವಮೊಗ್ಗ: ಶಿವಮೊಗ್ಗ-ತಾಳಗುಪ್ಪ ಪ್ಯಾಸೆಂಜರ್ ರೈಲು ಸಂಚಾರದ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. ಈ ರೈಲು ಸಂಚಾರಕ್ಕೆ ಅಗತ್ಯವಾದ ಹೊಸ ಬೋಗಿಗಳು ಕೂಡ ಸಿದ್ಧವಿದೆ. ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿದ್ದಂತೆ ರೈಲು ಸಂಚಾರ ಕ್ರಮಕೈಗೊಳ್ಳಲಾಗುವುದು ಎಂದು ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ವಿಭಾಗೀಯ ವ್ಯವಸ್ಥಾಪಕ ವಿನೋದ್ ಕುಮಾರ್ ತಿಳಿಸಿದರು.
ನಗರದ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
ಈಗಾಗಲೇ ಈ ರೈಲು ಸಂಚಾರಕ್ಕೆ ಸಂಬಂಧಿಸಿದಂತೆ ಪ್ರಸ್ತಾವ ಕಳುಹಿಸಲಾಗಿದೆ. ಕೇಂದ್ರದ ಅನುಮತಿ ಸಿಕ್ಕ ಕೂಡಲೇ ರೈಲು ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ರೈಲು ಸಂಚಾರಕ್ಕೆ ಅಗತ್ಯವಾದ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಮೈಸೂರು-ತಾಳಗುಪ್ಪ ಇಂಟರ್‌ಸಿಟಿ ರೈಲಿಗೆ ಪ್ರಯಾಣಿಕರ ಪ್ರತಿಕ್ರಿಯೆ ನೀರಸವಾಗಿದೆ. ರೈಲ್ವೆಗೆ ನಿಗದಿತ ಪ್ರಮಾಣದ ಆದಾಯ ದೊರಕುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ರೈಲಿನ ಸಂಚಾರದ ವೇಳಾಪಟ್ಟಿ ಬದಲಾವಣೆಗೆ ಚಿಂತನೆ ನಡೆದಿದೆ ಎಂದರು.
ಶಿವಮೊಗ್ಗ ಮುಖ್ಯ ರೈಲ್ವೆ ನಿಲ್ದಾಣದ ಸುತ್ತಮುತ್ತಲಿರುವ ರೈಲು ಜಾಗಕ್ಕೆ ತಂತಿ ಬೇಲಿ ಹಾಕುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ವಿನೋದ್‌ಕುಮಾರ್ ಮುಖ್ಯ ರೈಲು ನಿಲ್ದಾಣದ ಫ್ಲ್ಯಾಟ್‌ಫಾರಂ ಹಾಗೂ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಖುದ್ದು ಪರಿಶೀಲನೆ ನಡೆಸಿದರು. ಸ್ಥಳೀಯ ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಅಲ್ಲದೇ, ರೈಲ್ವೆ ನೌಕರರ ಅಹವಾಲು ಆಲಿಸಿದರು.
ಹೆಚ್ಚುವರಿ ಬೋಗಿ
ಶಿವಮೊಗ್ಗ-ತಾಳಗುಪ್ಪ-ಬೆಂಗಳೂರು ರೈಲಿಗೆ ಹೆಚ್ಚುವರಿ ಒಂದು ಬೋಗಿ ಜೋಡಿಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ವಿವಿಧ ಸಂಘಟನೆಗಳ ಮುಖಂಡರಿಗೆ ಭರವಸೆ ನೀಡಿದರು.
ಶಿವಮೊಗ್ಗ-ತಾಳಗುಪ್ಪ-ಬೆಂಗಳೂರು ರೈಲಿಗೆ ಪ್ರಯಾಣಕರ ಒತ್ತಡ ಇದೆ. ಆದರೆ, ಇದಕ್ಕೆ ಎರಡು ಬೋಗಿ ಜೋಡಿಸಲು ಸಾಧ್ಯವಿಲ್ಲ. ಸದ್ಯಕ್ಕೆ ಒಂದು ಬೋಗಿ ಜೋಡಿಸಲು ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಹೊಸನಗರ ತಾಲ್ಲೂಕು ಅರಸಾಳು ಗ್ರಾಮದಲ್ಲಿ ನಿಲುಗಡೆ ಕುರಿತಂತೆ ಸಂಸತ್ ಸದಸ್ಯರ ಶಿಫಾರಸು ಪತ್ರ ಅಗತ್ಯವಿದ್ದು, ಅದು ಬಂದ ಮೇಲೆ ಅಲ್ಲಿ ನಿಲುಗಡೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.