ADVERTISEMENT

ಕ್ರಿಯಾಶೀಲ ಬದುಕು ರೂಪಿಸಲು ಶ್ರೀಗಳ ಕರೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 11:05 IST
Last Updated 18 ಜನವರಿ 2011, 11:05 IST

ಚಿತ್ರದುರ್ಗ: ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಧರ್ಮಪ್ರಜ್ಞೆ, ಸ್ವಾಭಿಮಾನ ಮತ್ತು ಕ್ರಿಯಾಶೀಲ ಬದುಕು ಮುಖ್ಯ ಎಂದು ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ನುಡಿದರು.ನಗರದ ತರಾಸು ಜಿಲ್ಲಾ ರಂಗಮಂದಿರದಲ್ಲಿ ನಡೆಯುತ್ತಿರುವ ಜನಜಾಗೃತಿ ಭಾವೈಕ್ಯ ಧರ್ಮ ಸಮಾವೇಶದ 3ನೇ ದಿನದ ನೇತೃತ್ವವಹಿಸಿ ಅವರು ಮಾತನಾಡಿದರು.

ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಮಾತ್ರ ಶ್ರೇಯಸ್ಸನ್ನು ಕಾಣಲು ಸಾಧ್ಯ.‘ಕರ್ತವ್ಯದ ಕಾಲುದಾರಿ ಕೀರ್ತಿಯ ಹೆದ್ದಾರಿ’. ಕರ್ತವ್ಯಶೀಲ ಜೀವನದಿಂದ ಉನ್ನತಿ ಸಾಧ್ಯವಾಗುತ್ತದೆ. ‘ವೃತ್ತಿಶ್ಚೈತನ್ಯರೂಪಿಣೇ’ ಎಂದು ಜಗದ್ಗುರು ರೇಣುಕಾಚಾರ್ಯರು ಸ್ಪಷ್ಟಪಡಿಸಿದ್ದಾರೆ.ಕಾಯಕವೇ ಕೈಲಾಸ ಎಂದು ಶಿವಶರಣರು ಸಾರಿದ್ದಾರೆ.ಶ್ರಮದ ಬೆವರಿನ ಫಲ ಶಾಶ್ವರ ಸುಖ ನೀಡುತ್ತದೆ. ಪರಿಶ್ರಮವಿಲ್ಲದೆ ಫಲ ದೊರೆಯಲಾರದು ಎಂದು ಸಂದೇಶ ನೀಡಿದರು.

ಶೀಲವಿಲ್ಲದ ಶಿಕ್ಷಣ, ತ್ಯಾಗವಿಲ್ಲದ ಪೂಜೆ, ನೀತಿ ಇಲ್ಲದ ವಾಣಿಜ್ಯ, ತತ್ವರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ಆತ್ಮಶಾಂತಿ ಇಲ್ಲದ ಭೋಗ ನಿರರ್ಥಕ ಎಂದು ಮಹಾತ್ಮಾ ಗಾಂಧೀಜಿ ಅವರು ಹೇಳಿದ್ದನ್ನು ಮರೆಯಲಾಗದು. ನೀತಿ ಇಲ್ಲದ ಶಿಕ್ಷಣ, ಭೀತಿ ಇಲ್ಲದ ಶಾಸನ, ಮಿತಿ ಇಲ್ಲದ ಜೀವನ, ಸೀಮಾತೀತವಾದ ಸ್ವಾತಂತ್ರ್ಯ ವಿಪತ್ತುಗಳನ್ನು ಉಂಟು ಮಾಡುತ್ತವೆ ಎಂದರು.ನಗರದ ಓಂಕಾರೇಶ್ವರ ಮಠದ ಪರಿಸರವನ್ನು ಅಭಿವೃದ್ಧಿಪಡಿಸಲು ಗಮನಹರಿಸಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಭೀಮಸಮುದ್ರದ ಜಿ.ಎಸ್. ಮಂಜುನಾಥ್ ಮಾತನಾಡಿ, ಎಲ್ಲ ವೀರಶೈವ ಲಿಂಗಾಯತ ಒಳಪಂಗಡಗಳು ಒಂದಾಗಬೇಕು. ಸಮಾಜ ಒಂದುಗೂಡಿ ಒಗ್ಗಟ್ಟು ಸಾಧಿಸಬೇಕು ಎಂದು ನುಡಿದರು.ತಾವರಕೆರೆ ಶಿಲಾಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ವಕೀಲ ಬಿ.ಕೆ. ರಹಮತ್‌ಉಲ್ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬಿ. ನೀಲಮ್ಮ, ನಗರಸಭೆ ಸದಸ್ಯೆ ರುದ್ರಾಣಿ ಗಂಗಾಧರ್, ಪತ್ರಕರ್ತರಾದ ಶ್ರೀನಿವಾಸ್, ಬಸವರಾಜು ಹಾಜರಿದ್ದರು. ಗಾಯತ್ರಿದೇವಿ ಕಾರ್ಯಕ್ರಮ ನಿರೂಪಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.