ADVERTISEMENT

ಚುನಾವಣೆ; ಶಾಸಕ ಸುಧಾಕರ್ ಬಣಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 7:15 IST
Last Updated 13 ಜನವರಿ 2012, 7:15 IST

ಹಿರಿಯೂರು: ಇಲ್ಲಿನ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸ್ಥಾನದ ಮೊದಲ ಅವಧಿಯ 20 ತಿಂಗಳಲ್ಲಿ ಬಾಕಿ ಉಳಿದಿರುವ ಹತ್ತು ತಿಂಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶಾಸಕ ಡಿ. ಸುಧಾಕರ್ ಬೆಂಬಲಿತ ಗುಂಪಿನ ಅಭ್ಯರ್ಥಿಗೆ ಅದೃಷ್ಟಲಕ್ಷ್ಮಿ ಕೈಕೊಟ್ಟರೆ, ವಿರೋಧಿ ಪಾಳೆಯದಲ್ಲಿ ಗೆಲುವಿನ ಸಂಭ್ರಮ ಮೇರೆ ಮೀರಿತ್ತು.

22 ಸದಸ್ಯ ಬಲದ ಪಂಚಾಯ್ತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುಧಾಕರ್ ಗುಂಪಿನ ಅರುಣಾ ಪಟೇಲ್ ಮತ್ತು ವಿರೋಧಿ ಗುಂಪಿನ ಗಿರಿಜಮ್ಮ ತಲಾ 11 ಮತಗಳನ್ನು ಪಡೆದು, ಅಂತಿಮವಾಗಿ ಲಾಟರಿಯಲ್ಲಿ ಆಯ್ಕೆಯಾದ ಗಿರಿಜಮ್ಮ ವಿಜಯಿಯಾದರು.

ಮೊದಲ ಅವಧಿಗೆ ಅಧ್ಯಕ್ಷರ ಆಯ್ಕೆ ನಡೆಯುವಾಗ ಅನುರಾಧಾ ಮತ್ತು ಅರುಣಾ ಪಟೇಲ್ ನಡುವಿನ ಪೈಪೋಟಿ ತಪ್ಪಿಸಲು ಮುಖಂಡರು, ತಲಾ ಹತ್ತು ತಿಂಗಳ ಅಧಿಕಾರ ಹಂಚಿಕೆಯ ಸೂತ್ರ ರೂಪಿಸಿದ್ದರು. ತೀರ್ಮಾನದಂತೆ ಅನುರಾಧಾ ಅವರು ಹತ್ತು ತಿಂಗಳ ನಂತರ ರಾಜೀನಾಮೆ ಸಲ್ಲಿಸಿದರು. ಆದರೆ ಉಳಿದ ಅವಧಿಯ ಅಧಿಕಾರ ಹಿಡಿಯುವುದು ಅರುಣಾ ಪಟೇಲ್ ಅವರಿಗೆ ಸುಲಭವಾಗಲಿಲ್ಲ ಎನ್ನುವುದಕ್ಕೆ ಗುರುವಾರ ನಡೆದ ನಾಟಕೀಯ ಬೆಳವಣಿಗೆಗಳು ಸಾಕ್ಷಿಯಾದವು.

ಶಾಸಕ ಡಿ. ಸುಧಾಕರ್ ವಿರುದ್ಧ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರ ದೊಡ್ಡ ಪಡೆಯೇ ಕೈಮಿಲಾಯಿಸಿದರು. ಅಂತಿಮವಾಗಿ ಶಾಸಕರ ವಿರೋಧಿ ಬಣ ರಚನೆ ಮಾಡಿ, ಗಿರಿಜಮ್ಮ ಅವರನ್ನು ಕಣಕ್ಕೆ ಇಳಿಸಿದರು. ಸ್ವಲ್ಪ ಸಮಯ ಯಾವ ಪಕ್ಷದವರು ಯಾರ ಪರವಾಗಿದ್ದಾರೆ ಎನ್ನುವುದು ಯಾರಿಗೂ ತಿಳಿಯದಂತಹ ವಾತಾವರಣ ನಿರ್ಮಾಣವಾಗಿತ್ತು.

22 ಸದಸ್ಯ ಬಲದ ಪಂಚಾಯ್ತಿಯಲ್ಲಿ ಜೆಡಿಎಸ್ 11, ಕಾಂಗ್ರೆಸ್ 5, ಪಕ್ಷೇತರರು 5 ಹಾಗೂ ಬಿಜೆಪಿಯ ಒಬ್ಬರು ಸದಸ್ಯರಿದ್ದು, ಸುಧಾಕರ್ ಬೆಂಬಲಿತ ಅರುಣಾ ಪಟೇಲ್ ಅವರಿಗೆ ಮತ ನೀಡುವಂತೆ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಸ್.ಕೆ. ಬಸವರಾಜನ್ `ವಿಪ್~ ಜಾರಿ ಮಾಡಿದ್ದು ಪ್ರಯೋಜನಕ್ಕೆ ಬರಲಿಲ್ಲ.

ಐಮಂಗಲ ತಾ.ಪಂ. ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆ ಆಗಿರುವ ಗಿರಿಜಮ್ಮ ಅವರಿಗೆ ವಿಪ್ ಉಲ್ಲಂಘನೆ ಮಾಡಿ ಜೆಡಿಎಸ್‌ನ ನಾಲ್ವರು ಮತ ಚಲಾಯಿಸಿದರೆ, ಕಾಂಗ್ರೆಸ್‌ನ ಐದು, ಬಿಜೆಪಿ ಮತ್ತು ಸ್ವತಂತ್ರ ಅಭ್ಯರ್ಥಿಯೊಬ್ಬರು ಬೆಂಬಲಿಸಿದ್ದರಿಂದ ಚುನಾವಣೆಗೆ ರಂಗು ಬಂದಿತು.

ಜೆಡಿಎಸ್‌ನ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಜಯಣ್ಣ ಶಾಸಕರ ವಿರೋಧಿ ಬಣದಲ್ಲಿ ಕಂಡುಬಂದರೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ಯಶೋಧರ ಅರುಣಾ ಪಟೇಲ್ ಗುಂಪಿನಲ್ಲಿದ್ದರು.

ಚುನಾವಣೆ ನಂತರ ನಡೆದ ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರಾದ ಎನ್.ಆರ್. ಲಕ್ಷ್ಮೀಕಾಂತ್, ಜಯಣ್ಣ, ಕಾಂಗ್ರೆಸ್ ಮುಖಂಡರಾದ ಮೀಸೆ ಮಹಾಲಿಂಗಪ್ಪ, ಜಿ.ಎಸ್. ಮಂಜುನಾಥ್, ಎಂ.ಡಿ. ರವಿ, ಅಷ್ವಕ್‌ಅಹಮದ್ ಮತ್ತಿತರರು ಕಾಣಿಸಿಕೊಂಡು ಅಚ್ಚರಿಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.