ADVERTISEMENT

ಜಿ.ಪಂ.ನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ?

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 9:00 IST
Last Updated 6 ಜನವರಿ 2011, 9:00 IST

ಚಿತ್ರದುರ್ಗ: ಜಿಲ್ಲಾ ಪಂಚಾಯ್ತಿ ಮತ ಎಣಿಕೆ ಮುಗಿಯುತ್ತಿದ್ದಂತೆ ಈಗ ಅಧಿಕಾರ ಹಿಡಿಯುವ ಕಸರತ್ತು ಆರಂಭವಾಗಿದೆ. ಅತಂತ್ರ ಸ್ಥಿತಿ ಉಂಟಾಗಿರುವ ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು, ಮುಖಂಡರು ಈ ಬಗ್ಗೆ ಗಂಭೀರವಾಗಿ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಜಿ.ಪಂ.ನ ಒಟ್ಟು 34 ಸ್ಥಾನಗಳಲ್ಲಿ ಕಾಂಗ್ರೆಸ್ 16 ಸ್ಥಾನಗಳಿಸಿ ಮುನ್ನಡೆ ಸಾಧಿಸಿದೆ. ಬಹುಮತಕ್ಕೆ 2 ಸ್ಥಾನಗಳ ಕೊರತೆಯಾಗಿದೆ. ಅನಿವಾರ್ಯವಾಗಿಜೆಡಿಎಸ್ ಬೆಂಬಲ ಪಡೆಯುವುದು ಅಗತ್ಯ. ಆದರೆ, ತನಗೆ ಅಧಿಕಾರ ದೊರೆಯುವುದಾದರೆ ಏಕೆ ಬೇಡ ಎನ್ನುವ ಸ್ಥಿತಿಯಲ್ಲಿರುವ ಜೆಡಿಎಸ್, ಬಿಜೆಪಿಯತ್ತ ಕಣ್ಣು ಮಿಟುಕಿಸುತ್ತಿದೆ.

ಕೇವಲ 6 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್, ಅಧ್ಯಕ್ಷ ಸ್ಥಾನವನ್ನು ತನಗೆ  ನೀಡುವುದಾದರೆ ಮಾತ್ರ ಬಿಜೆಪಿ ಜತೆ ಕೈಜೋಡಿಸಲು ಸಿದ್ಧವಾಗುತ್ತಿದೆ. ರಾಜ್ಯಮಟ್ಟದಲ್ಲಿ ಬಿಜೆಪಿ ವಿರುದ್ಧ ಜೆಡಿಎಸ್ ಹೋರಾಟ ನಡೆಸುತ್ತಿರಬಹುದು. ತತ್ವ ಸಿದ್ಧಾಂತಗಳು ವಿಭಿನ್ನವಾಗಿರಬಹುದು. ಆದರೆ, ಸ್ಥಳೀಯವಾಗಿ ಪರಿಸ್ಥಿತಿ ಭಿನ್ನವಾಗಿರುವುದರಿಂದ ಕೈಜೋಡಿಸುವುದರಲ್ಲಿ ತಪ್ಪೇನು ಎನ್ನುವುದು ಉಭಯ ಪಕ್ಷಗಳ ಮುಖಂಡರ ವಾದ. ಈ ನಿಟ್ಟಿನಲ್ಲಿ ಈಗಾಗಲೇ ಸಮಾಲೋಚನೆಗಳು ಸಹ ನಡೆದಿವೆ.

12 ಸ್ಥಾನಗಳನ್ನು ಗಳಿಸಿರುವ ಬಿಜೆಪಿ, ವಿರೋಧ ಪಕ್ಷದಲ್ಲಿರುವ ಬದಲು ಅಧಿಕಾರದಲ್ಲಿರಬೇಕು ಎನ್ನುವ ಬಗ್ಗೆ ಆಸಕ್ತಿವಹಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಸಂಘಟಿಸಬಹುದು ಎನ್ನುವ ಆಲೋಚನೆ ಬಿಜೆಪಿಯದ್ದು. ‘ಜೆಡಿಎಸ್ ಜತೆ ಕೈಜೋಡಿಸಲು ಬಿಜೆಪಿ ಸಿದ್ಧ. ಇದು ಸ್ಥಳೀಯ ರಾಜಕೀಯವಾಗಿರುವುದರಿಂದ ಹೊಂದಾಣಿಕೆ ಮಾಡಿಕೊಳ್ಳುವುದು ತಪ್ಪೇನಲ್ಲ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಜತೆ ಹೊಂದಾಣಿಕೆಗೆ ಹಿಂಜರಿಯುವುದಿಲ್ಲ. ಈಗಾಗಲೇ, ಜೆಡಿಎಸ್ ಶಾಸಕ ಎಸ್.ಕೆ. ಬಸವರಾಜನ್ ಜತೆ ಮಾತುಕತೆ ನಡೆಸಿದ್ದು, ಅವರು ಸಹ ಉತ್ತಮವಾಗಿ ಪ್ರತಿಕ್ರಿಯಿಸಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್ ಯಾದವ್ ತಿಳಿಸಿದ್ದಾರೆ. ಬಿಜೆಪಿ ಹೇಳಿಕೆಯನ್ನು ಜೆಡಿಎಸ್ ಸಹ ಪುರಸ್ಕರಿಸಿದೆ. ಎಲ್ಲದಕ್ಕೂ ವರಿಷ್ಠರ ಜತೆ ಸಮಾಲೋಚಿಸುವುದಾಗಿ ತಿಳಿಸಿದೆ.

‘ಬಿಜೆಪಿ ನಮ್ಮ ಬೆಂಬಲ ಕೋರಿದೆ. ಅಧ್ಯಕ್ಷ ಸ್ಥಾನ ನಮಗೆ ನೀಡಿದರೆ ಒಪ್ಪಿಗೆ ಇದೆ. ನಮಗೂ ಅಧಿಕಾರ ಹಿಡಿಯಬೇಕು ಎನ್ನುವ ಇಚ್ಛೆ ಇದೆ. ಆದರೆ, ಎಲ್ಲವೂ ಅಂತಿಮವಾಗಿ ವರಿಷ್ಠರ ನಿರ್ಧಾರಕ್ಕೆ ಬದ್ಧ’ ಎಂದು ಶಾಸಕ ಮತ್ತು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಕೆ. ಬಸವರಾಜನ್ ತಿಳಿಸಿದರು.

ಬಿಜೆಪಿ-ಜೆಡಿಎಸ್ ಮೈತ್ರಿ ಕಷ್ಟಸಾಧ್ಯ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ. ಜೆಡಿಎಸ್ ಚಿತ್ರದುರ್ಗ ತಾಲ್ಲೂಕಿನಲ್ಲಿ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿದೆ. ಚಿತ್ರದುರ್ಗ ತಾಲ್ಲೂಕಿನ ಜಿ.ಪಂ. ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ಒಂದು ಸ್ಥಾನವೂ ದೊರೆತಿಲ್ಲ. ಜತೆಗೆ, ತಾ.ಪಂ.ನಲ್ಲೂ ಕೇವಲ 5 ಸ್ಥಾನಗಳನ್ನು ಮಾತ್ರ ಗಳಿಸಿದೆ. ಪರಿಸ್ಥಿತಿ ಹೀಗಿರುವಾಗ ಜೆಡಿಎಸ್‌ಗೆ ಏಕೆ ಅಧಿಕಾರ ನೀಡಬೇಕು ಎನ್ನುವ ಅಭಿಪ್ರಾಯವನ್ನು ಬಿಜೆಪಿಯ ಕೆಲವು ಮುಖಂಡರು ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖಪಾತ್ರವಹಿಸಿರುವ ಮಾಜಿ ಸಚಿವ ಡಿ. ಸುಧಾಕರ್ ಅವರೇ ಮೈತ್ರಿ ವಿಷಯದಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ. ಆದ್ದರಿಂದ, ಸುಧಾಕರ್ ಬಿಜೆಪಿ ಪರ ಒಲವು ತೋರುವ ಸಾಧ್ಯತೆಗಳು ಕಡಿಮೆ ಎನ್ನುವ ಅಭಿಪ್ರಾಯಗಳು ಸಹ ದಟ್ಟವಾಗಿವೆ.ಕಾಂಗ್ರೆಸ್ ಮಾತ್ರ ಜೆಡಿಎಸ್ ಜತೆ ಸೇರಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದೆ.

‘ಗುರುವಾರ ಬೆಂಗಳೂರಿನಲ್ಲಿ ಕೆಪಿಸಿಸಿ ಸಭೆ ಇದೆ. ಅಲ್ಲಿ ವರಿಷ್ಠರು ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ. ಜೆಡಿಎಸ್, ಬಿಜೆಪಿ ಜತೆ ಹೋಗುವುದಿಲ್ಲ ಎನ್ನುವ ವಿಶ್ವಾಸವಿದೆ’ ಎನ್ನುತ್ತಾರೆ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ. ಒಟ್ಟಿನಲ್ಲಿ ಯಾವುದೇ ರೀತಿ ಮೈತ್ರಿ ನಡೆದರೂ ಜೆಡಿಎಸ್‌ಗೆ ಲಾಭ. ಕನಿಷ್ಠ ಉಪಾಧ್ಯಕ್ಷ ಸ್ಥಾನವಾದರೂ ತನಗೆ ದೊರೆಯುತ್ತದೆ. ತನ್ನ ಬೆಂಬಲವಿಲ್ಲದೆ ಯಾರಿಗೂ ಅಧಿಕಾರ ದೊರೆಯುವುದಿಲ್ಲ ಎಂದು ಜೆಡಿಎಸ್ ಬೀಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.