ADVERTISEMENT

ಜಿಲ್ಲೆಯಲ್ಲಿ ಹಾಸ್ಟೆಲ್ ಅವ್ಯವಸ್ಥೆ: ಸಿಇಒ ಗರಂ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 5:30 IST
Last Updated 12 ಫೆಬ್ರುವರಿ 2011, 5:30 IST

ಚಿತ್ರದುರ್ಗ: ಜಿಲ್ಲೆಯಲ್ಲಿನ ಹಾಸ್ಟೆಲ್ ಅವ್ಯವಸ್ಥೆಗಳ ಕುರಿತು ಜಿಲ್ಲಾ ಪಂಚಾಯ್ತಿ ಸಿಇಒ ರಂಗೇಗೌಡ ಕೆಂಡಾಮಂಡಲವಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಿಇಒ, ಜಿಲ್ಲೆಯಲ್ಲಿ ಹಾಸ್ಟೆಲ್‌ಗಳ ಸ್ಥಿತಿ ಸರಿ ಇಲ್ಲ. ಬಯೋಮೆಟ್ರಿಕ್ ಇಲ್ಲದೆ ಹಣ ಪಾವತಿಸಿದರೆ ನೀವೇ ನೇರ ಹೊಣೆಯಾಗುತ್ತೀರಿ. ಕಳೆದ ಎರಡು ತಿಂಗಳಿಂದ ಹಾಸ್ಟೆಲ್ ತೆರೆದಿಲ್ಲ ಎಂದು ಗ್ರಾಮವೊಂದರ ಜನತೆ ತಿಳಿಸಿದ್ದಾರೆ. ನೀವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಂತ್ರಿಕ ನೆಪಗಳನ್ನು ಹೇಳಿ ಬಯೋಮೆಟ್ರಿಕ್‌ನಿಂದ ತಪ್ಪಿಸಿಕೊಳ್ಳಬಾರದು. ಶೇ. 20ರಷ್ಟು ಹಾಜರಾತಿ ಇಲ್ಲದಿದ್ದರೂ ಶೇ. 100ರಷ್ಟು ಹಣ ಪಾವತಿಯಾಗುತ್ತಿವೆ. ಕೆಲವೆಡೆ ಶೂನ್ಯ ಹಾಜರಾತಿಯೂ ಇದೆ ಎಂದು ಕಿಡಿಕಾರಿದರು.

ಇತ್ತೀಚೆಗೆ ಕಾರ್ಯದರ್ಶಿಗಳು ಜಿಲ್ಲೆಗೆ ಭೇಟಿ ನೀಡಿದಾಗ ಹಾಸ್ಟೆಲ್‌ಗಳ ಸ್ಥಿತಿಗತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಮುಂದುವರಿದರೆ ಸರ್ಕಾರದಿಂದ ಪರಿಶೀಲನೆಗೆ ತಂಡವನ್ನೇ ಕಳುಹಿಸುತ್ತಾರೆ. ಹಾಸ್ಟೆಲ್ ಸ್ಥಿತಿಗತಿ ಸುಧಾರಿಸದಿದ್ದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಚಳ್ಳಕೆರೆ ತಾಲ್ಲೂಕಿನಲ್ಲಿ ಎಷ್ಟು ಹಾಸ್ಟೆಲ್‌ಗಳಿವೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮತ್ತು ತಾ.ಪಂ. ಇಒ ಅವರನ್ನು ಕೇಳಿದಾಗ ಇಬ್ಬರು ತಬ್ಬಿಬ್ಬಾದರು. ಇಬ್ಬರೂ ಮಾಹಿತಿ ನೀಡಲು ಪರದಾಡಿದರು.

ಜಿ.ಪಂ. ಅಧ್ಯಕ್ಷ ಸಿ. ಮಹಲಿಂಗಪ್ಪ ಮಾತನಾಡಿ, ಜಿಲ್ಲೆಯಲ್ಲಿ ಹಾಸ್ಟೆಲ್‌ಗಳ ಸ್ಥಿತಿ ಉತ್ತಮವಾಗಿಲ್ಲ. ಮಕ್ಕಳಿಗೆ ಸರಿಯಾಗಿ ಊಟವೂ ಸಿಗುತ್ತಿಲ್ಲ. ಬಡಮಕ್ಕಳಿಗೆ ಅನ್ಯಾಯ ಮಾಡಬೇಡಿ. ನಿಮ್ಮ ಮಕ್ಕಳ ರೀತಿಯಲ್ಲಿ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ವಿತರಣೆಯಾಗದ ಸಾಮಗ್ರಿಗಳು:  ಹಾಸ್ಟೆಲ್‌ಗಳಿಗೆ ಹೊದಿಕೆ, ನೀರಿನ ಫಿಲ್ಟರ್ ಮತ್ತಿತರರ ಸಾಮಗ್ರಿಗಳನ್ನು ಬಿಆರ್‌ಜಿಎಫ್ ಯೋಜನೆ ಅಡಿ ಖರೀದಿಸಿದ್ದರೂ, ವಿದ್ಯಾರ್ಥಿಗಳಿಗೆ ವಿತರಿಸದೆ ಕೊಠಡಿಯಲ್ಲಿಡಲಾಗಿದೆ. ಯಾವುದನ್ನೂ ಬಳಸುತ್ತಿಲ್ಲ. ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ನಿಷ್ಪ್ರಯೋಜಕ ಆಗುತ್ತಿವೆ.

ವಾರ್ಡನ್‌ಗಳಿಗೆ ಸಾಮಗ್ರಿಗಳ ಸದ್ಬಳಕೆ ಬಗ್ಗೆ ಸೂಚಿಸಬೇಕು. ನಿಮಗೆ ನೋಡಿಕೊಳ್ಳಲು ಆಗುವುದಿಲ್ಲವೇ  ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಿಇಒ ತರಾಟೆಗೆ ತೆಗೆದುಕೊಂಡರು.

ಜಿಲ್ಲೆಯಲ್ಲಿ 39 ಖಾಸಗಿ ಹಾಸ್ಟೇಲ್‌ಗಳಿವೆ. ಮುಖ್ಯ ಯೋಜನಾ ಅಧಿಕಾರಿ ಈ ಹಾಸ್ಟೆಲ್‌ಗಳ ತಪಾಸಣೆ ಮಾಡಿ ವರದಿ ನೀಡಬೇಕು. ಈ ವರದಿಯ ನಂತರವೇ ಹಣ ಬಿಡುಗಡೆ ಮಾಡಲಾಗುವುದು ಎಂದು ಜಿ.ಪಂ. ಅಧ್ಯಕ್ಷ ಮಹಲಿಂಗಪ್ಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.