ಚಳ್ಳಕೆರೆ: ಎಲ್ಲಾ ರಾಜಕೀಯ ಪಕ್ಷಗಳು ಮೀಸಲಾತಿ ಕ್ಷೇತ್ರಗಳಲ್ಲಿ ಅಸ್ಪೃಶ್ಯ ದಲಿತರಿಗೆ ಟಿಕೆಟ್ ನೀಡಬೇಕು ಹಾಗೂ ಆ ಕ್ಷೇತ್ರದ ಮೇಲ್ಜಾತಿ ಮತದಾರರು ನಿಜವಾದ ಅಸ್ಪೃಶ್ಯರನ್ನು ಗೆಲ್ಲಿಸುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸಬೇಕು ಎಂದು ಮಾಜಿ ಸಚಿವೆ ಮೋಟಮ್ಮ ಅಭಿಪ್ರಾಯಪಟ್ಟರು.
ಚಳ್ಳಕೆರೆ ಪಟ್ಟಣದ ಛಲವಾದಿ ಸಮುದಾಯ ಭಾನುವಾರ ಇಲ್ಲಿನ ಒಕ್ಕಲಿಗರ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಆಶಯಗಳು ಈಡೇರಬೇಕಾದರೆ ಸಮಾಜದಲ್ಲಿ ಶೋಷಿತರಿಗೆ ಮತ್ತು ದಲಿತರಿಗೆ ರಾಜಕೀಯ ಮತ್ತು ಸಾಮಾಜಿಕ ಸ್ಥಾನಮಾನಗಳು ಸಿಗವಂತಾಗಬೇಕು. ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿ 70 ಸಾವಿರ ಅಸ್ಪೃಶ್ಯ ದಲಿತರ ಮತಗಳು ಇವೆ. ಆದರೂ, ಅಲ್ಲಿ ಕಡಿಮೆ ಸಂಖ್ಯೆ ಇರುವ ಸಮುದಾಯದವರಿಗೆ ಟಿಕೆಟ್ ನೀಡಲಾಯಿತು ಎಂದರು.
ಶೋಷಣೆಗೆ ಒಳಗಾದ ಸಮುದಾಯಗಳ ಮೇಲೆ ಇಂದಿಗೂ ಸಮಾಜದಲ್ಲಿ ದೌರ್ಜನ್ಯಗಳು ನಡೆಯುತ್ತಲೇ ಇವೆ. ಅದ್ದರಿಂದ, ಅಸ್ಪೃಶ್ಯ ದಲಿತರು ಒಂದಾಗಬೇಕು. ಆ ಮೂಲಕ ಸಂವಿಧಾನದ ಸೌಲಭ್ಯಗಳನ್ನು ಪಡೆಯಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುರುಘಾ ಮಠದ ಮುರುಘಾ ಶರಣರು, ಹನುಮಂತಪ್ಪ, ಶಾಸಕ ಟಿ.ರಘುಮೂರ್ತಿ, ಎಚ್.ಸಿ. ನಿರಂಜನ ಮೂರ್ತಿ, ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ್ ತೆಲಗಾವಿ, ದಲಿತ ಮುಖಂಡ ಎಂ.ಶಿವಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.