ಹಿರಿಯೂರು: ಇಲ್ಲಿನ ಪುರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಕ್ಕೆ ಮಾರ್ಚ್ 13ರಂದು ಚುನಾವಣೆ ನಡೆಯುತ್ತಿದ್ದು, ತೇರುಮಲ್ಲೇಶ್ವರ ಸ್ವಾಮಿ ನನಗೆ ಬುದ್ಧಿಕೊಟ್ಟಂತೆ ಅಭ್ಯರ್ಥಿಯ ಹೆಸರು ಸೂಚಿಸುತ್ತೇನೆ ಎಂದು ಶಾಸಕ ಡಿ.ಸುಧಾಕರ್ ಆಕಾಂಕ್ಷಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ತಮ್ಮ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ 8 ಹಾಗೂ ತಮ್ಮ ಬೆಂಬಲದಿಂದ ಗೆದ್ದಿರುವ 9 ಹಾಗೂ ಇಬ್ಬರು ಪಕ್ಷೇತರ ಸದಸ್ಯರು ಸೇರಿ ಒಟ್ಟು 19 ಸದಸ್ಯರ ಜತೆ ಚರ್ಚೆ ನಡೆಸಿದ ನಂತರ ಶಾಸಕರು ದೇವರ ಹೆಸರನ್ನು ಹೇಳಿದರು ಎಂದು ಸಭೆಯಲ್ಲಿ ಹಾಜರಿದ್ದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಗುಂಪುಗಾರಿಕೆ, ಸದಸ್ಯರ ಪ್ರವಾಸ ಹೋಗುವುದು, ಖರೀದಿಗೆ ಮುಂದಾಗುವುದನ್ನು ಸಹಿಸಲಾಗದು. ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕಾರಣ ಪೈಪೋಟಿ ಹೆಚ್ಚಿದೆ. ಎಲ್ಲರಿಗೂ ತೃಪ್ತಿ ಪಡಿಸಲು ಆಗದು. ಅಧ್ಯಕ್ಷ–ಉಪಾಧ್ಯಕ್ಷರಿಗೆ ಮಾತ್ರ ಅಧಿಕಾರ ಇರುತ್ತದೆ ಎಂಬ ಮಾತು ಸಲ್ಲದು. ನಾನು ಸೂಚಿಸಿದ ವ್ಯಕ್ತಿಯನ್ನು ಎಲ್ಲರೂ ಬೆಂಬಲಿಸಬೇಕು ಎಂದು ಶಾಸಕರು ಸೂಚಿಸಿದರು ಎನ್ನಲಾಗಿದೆ.
ಅಧ್ಯಕ್ಷ–ಉಪಾಧ್ಯಕ್ಷ ಹುದ್ದೆಗಳು ಸಾಮಾನ್ಯ ವರ್ಗಕ್ಕೆ ಮೀಸಲಿರುವ ಕಾರಣ ಸಾಮಾನ್ಯ ವರ್ಗದಿಂದ ಆಯ್ಕೆಯಾಗಿರುವ ವಿ.ಶಿವಣ್ಣ ಅಥವಾ ಸಂಜಯ್ ಅವರಿಗೆ ಆದ್ಯತೆ ನೀಡಬೇಕು ಎಂಬ ವಾದ ಬುಧವಾರ ಕೇಳಿ ಬಂತು.
ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿರುವ ಜಬೀವುಲ್ಲಾ, ಜಿ.ಪ್ರೇಮ್ ಕುಮಾರ್, ರಾಜು (ಸೈಟ್), ಟಿ.ಚಂದ್ರಶೇಖರ್, ರವಿಚಂದ್ರನಾಯ್ಕ ಈ.ಮಂಜುನಾಥ್, ಎ.ಮಂಜುನಾಥ್ ಇವರಲ್ಲಿ ಅದೃಷ್ಟ ಯಾರಿಗೆ ಒಲಿಯುತ್ತದೆ ಎನ್ನುವುದು ಗುರುವಾರ ತಿಳಿಯಲಿದೆ. ಉಪಾಧ್ಯಕ್ಷ ಸ್ಥಾನವನ್ನು ಮಹಿಳೆಯೊಬ್ಬರಿಗೆ ನೀಡುವ ಆಕಾಂಕ್ಷೆ ಶಾಸಕರಲ್ಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.