ADVERTISEMENT

ತೋಟಕ್ಕೆ ಟ್ಯಾಂಕರ್‌ನಲ್ಲಿ ನೀರು ಪೂರೈಕೆ

ಪಾತಾಳಕ್ಕೆ ಇಳಿದ ಅಂತರ್ಜಲ; ಹತಾಶ ಸ್ಥಿತಿಯಲ್ಲಿ ತೋಟಗಾರಿಕೆ ಬೆಳೆಗಾರರು

ಪ್ರಜಾವಾಣಿ ವಿಶೇಷ
Published 13 ಡಿಸೆಂಬರ್ 2012, 6:49 IST
Last Updated 13 ಡಿಸೆಂಬರ್ 2012, 6:49 IST

ಮೊಳಕಾಲ್ಮುರು: ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಅಂತರ್ಜಲ ಪ್ರಮಾಣ ಪೂರ್ಣ ಕುಸಿತವಾಗುತ್ತಿದ್ದು, ನೀರಿಲ್ಲದೇ ತೋಟಗಾರಿಕಾ ಬೆಳೆಗಾರರಲ್ಲಿ ತೀವ್ರ ಹತಾಶ ಮನೋಭಾವ ಉಂಟಾಗುವ ಮೂಲಕ ಆತಂಕ ಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ಯಾವುದೇ ತೋಟಗಳಿಗೆ ಹೋದರೂ ಸಹ ನೀರಿಲ್ಲದೇ ಬಾಡುತ್ತಿರುವ ಗಿಡಗಳನ್ನು ಕಾಣಬಹುದಾಗಿದೆ. ಕಳೆದ 5-6 ವರ್ಷಗಳಿಂದ ಮಾತ್ರ ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಗಳತ್ತ ಹೆಚ್ಚಾಗಿ ಮುಖ ಮಾಡಿದ್ದ ಬೆಳೆಗಾರರು ಈಗ ಬೆಳೆದಿರುವ ಗಿಡಗಳನ್ನು ಉಳಿಸಿಕೊಳ್ಳುವುದು ಹೇಗಪ್ಪಾ..! ಎಂಬ ಗಾಢ ಚಿಂತೆಯಲ್ಲಿ ಮುಳುಗಿ ಹೋಗಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ರಾಯಾಪುರ ಸಮೀಪದ ಡಿ.ಎಚ್. ಶ್ರೀನಿವಾಸ್ ಅವರ ತೋಟಕ್ಕೆ ಭೇಟಿ ನೀಡಿ ಅವರನ್ನು ಈ ಕುರಿತು ಕೇಳಿದಾಗ,' ತಮ್ಮ 7.32 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಸೀಬೆ ಗಿಡಗಳು ಪೂರ್ಣವಾಗಿ ಒಣಗಿ ಹೋಗಿವೆ.

ಉಳಿದಂತೆ 23 ಎಕರೆಯಲ್ಲಿ ಬೆಳೆದಿರುವ ಮಾವು, ಸಪೋಟ ಮತ್ತು ಸೀಬೆ ಗಿಡಗಳನ್ನು ಉಳಿಸಿಕೊಳ್ಳಲು ಎರಡು ಕೊಳವೆಬಾವಿಗಳಲ್ಲಿ ಇರುವ ತಲಾ 1.25 ಇಂಚು ನೀರು ಆಶ್ರಯವಾಗಿದೆ. ಈ ವರ್ಷ ಇಳುವರಿ ಹಾಳಾಗಿ ಹೋಗಲಿ ಮುಂದಿನ ಮಳೆಗಾಲ ತನಕ ಗಿಡ ಒಣಗಿ ಹೋಗದಂತೆ ತಡೆಯಲು ಟ್ಯಾಂಕರ್ ಮೂಲಕ ನೀರು ತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ತೋಟಗಾರಿಕೆ ತಾಲ್ಲೂಕು ಸಹಾಯಕ ನಿರ್ದೇಶಕ ಆರ್. ವಿರೂಪಾಕ್ಷಪ್ಪ ಬುಧವಾರ ಮಾಹಿತಿ ನೀಡಿ, ತಾಲ್ಲೂಕಿನ ಕೊಂಡ್ಲಹಳ್ಳಿ, ತುಮಕೂರ‌್ಲಹಳ್ಳಿ, ಕಾಟನಾಯಕನಹಳ್ಳಿ, ರಾಯಾಪುರ, ಹಾನಗಲ್, ಎನ್.ಆರ್.ಕೆ. ಪುರ, ಓಬಳಾಪುರ, ಅಮಕುಂದಿ ಗ್ರಾಮಗಳಲ್ಲಿ ಸ್ಥಿತಿ ಕಷ್ಟಕರವಾಗಿದೆ.

ಕೊಳವೆಬಾವಿಗಳು ಬತ್ತಿ ನೀರು ಉಣಿಸುವುದು ಹೇಗೆ ಎಂದು ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಸದಾ ನೀರು ಇರುತ್ತಿದ್ದ ಗುಂಡ್ಲೂರು ಸುತ್ತಮುತ್ತ ತರಕಾರಿ ಬೆಳೆಗಾರರೂ ಅದಕ್ಕೆ ಭಿನ್ನವಾಗಿಲ್ಲ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ 130 ಹೆಕ್ಟೇರ್‌ನಲ್ಲಿ ಬಾಳೆ, 650 ಹೆಕ್ಟೇರ್‌ನಲ್ಲಿ ದಾಳಿಂಬೆ, 180 ಹೆಕ್ಟೇರ್‌ನಲ್ಲಿ ಮಾವು, 80 ಹೆಕ್ಟೇರ್‌ನಲ್ಲಿ ಸಪೋಟ, 15 ಹೆಕ್ಟೇರ್‌ನಲ್ಲಿ ನಿಂಬು ಸೇರಿದಂತೆ ಒಟ್ಟು 2,800 ಹೆಕ್ಟೇರ್ ತೋಟಗಾರಿಕೆ ಪ್ರದೇಶವಿದೆ. ನೀರಿನ ಕೊರತೆ ಕಾರಣ ಬಾಳೆ ನಾಟಿ ಮಾಡುವುದನ್ನು ಈ ಭಾಗದಲ್ಲಿ ಕೈಬಿಡಲಾಗಿದೆ. ಈ ವರ್ಷ ಬಾಳೆ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ವಿರೂಪಾಕ್ಷಪ್ಪ ಹೇಳಿದರು.

ನೀರಾವರಿ ಮೂಲವಿಲ್ಲದ ತಾಲ್ಲೂಕಿನ ಕೆರೆಗಳಿಗೆ ತುಂಗಭದ್ರಾ ಹಿನ್ನೀರು, ಭದ್ರಾಮೇಲ್ದಂಡೆ ಯೋಜನೆ, ಸೂಳೆಕೆರೆಯಿಂದ ನೀರು ಹಾಯಿಸಬೇಕು ಎಂಬ ಮಾತು ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳಿಂದ ಕೇಳಿಬರುತ್ತಿದ್ದು, ನಂತರದ ದಿನಗಳಲ್ಲಿ ಇವು ಜಾರಿಯಾಗಿದ್ದಲ್ಲಿ ಇಷ್ಟೊಂದು ಕಷ್ಟಕರ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂಬುದು ರೈತರ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.