ADVERTISEMENT

ದಿನೇ ದಿನೇ ಹೆಚ್ಚುತ್ತಿರುವ ಪ್ರಾಣಿಬಲಿ

ಪ್ರಾಣಿ ದಯಾ ಸಂಘದ ದಯಾನಂದ ಸ್ವಾಮೀಜಿ ವಿಷಾದ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 6:22 IST
Last Updated 10 ಮಾರ್ಚ್ 2018, 6:22 IST

ಮೊಳಕಾಲ್ಮುರು: ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡುವುದು ದಿನೇ ದಿನೇ ಹೆಚ್ಚುತ್ತಿರುವುದು ಆತಂಕಕಾರಿ, ಇದನ್ನು ತಡೆಯಲು ಸಮುದಾಯ ಸಹಕಾರ ನೀಡಬೇಕು ಎಂದು ಬೆಂಗಳೂರಿನ ಪ್ರಾಣಿ ದಯಾ ಸಂಘದ ದಯಾನಂದ ಸ್ವಾಮೀಜಿ ಮನವಿ ಮಾಡಿದರು.

ತಾಲ್ಲೂಕಿನ ಕೋನಸಾಗರದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಾಣಿ ಬಲಿ ವಿರೋಧಿ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

ಗ್ರಾಮದಲ್ಲಿ ನಡೆಯುತ್ತಿರುವ ಊರ ಮಾರಮ್ಮದೇವಿ ಜಾತ್ರೆಯಲ್ಲಿ ಕೋಣ, ಕುರಿ ಬಲಿಗೆ ಸಿದ್ಧತೆ ನಡೆದಿದೆ. ಈ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಬಲಿಗೆ ಕೊಡಲು ಮೀಸಲಿಟ್ಟಿದ್ದ ಕೋಣವನ್ನು ವಶಕ್ಕೆ ಪಡೆಯಲಾಗಿದೆ. ಇದು ಶ್ಲಾಘನೀಯ. ಆದರೆ, ಜನರುಸ್ವಯಂ ಪ್ರೇರಿತವಾಗಿ ಬಲಿ ಕೊಡುವುದನ್ನು ನಿಲ್ಲಿಸಬೇಕು ಎಂದು ಕೇಳಿಕೊಂಡರು.

ADVERTISEMENT

ದೇಶದ ಧರ್ಮ, ಸಂಸ್ಕೃತಿ, ಪರಂಪರೆಯಲ್ಲಿ ಪ್ರಾಣಿಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ಪ್ರಾಣಿಗಳನ್ನು ದೈವ ಸ್ವರೂಪದಲ್ಲೂ ಕಾಣಲಾಗುತ್ತಿದೆ. ಆದರೆ, ಕೆಲವರು ದೇವರ ಹೆಸರಿನಲ್ಲಿ ಪ್ರಾಣಿಗಳ ಬಲಿ ನೀಡುತ್ತಿರುವುದು ಅಮಾನವೀಯ ಎಂದು ವಿಷಾದಿಸಿದರು.

ಪ್ರಾಣಿಗಳ ಸಂರಕ್ಷಣೆಗಾಗಿ ಎಲ್ಲರೂ ಕೈಜೋಡಿಸಬೇಕು. ಉತ್ಸವಗಳಲ್ಲಿ ಪ್ರಾಣಿಗಳ ಹತ್ಯೆಯನ್ನು ತಡೆಯುವ ಸಾಮೂಹಿಕ ಪ್ರಯತ್ನ ನಡೆಯಬೇಕು ಎಂದು ಹೇಳಿದರು.

ಸಿಪಿಐ ಯಶವಂತ್, ಪಿಎಸ್‌ಐ ಮಂಜುನಾಥ್‌, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ್‌, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ದಾನಸೂರಯ್ಯ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.