ಚಳ್ಳಕೆರೆ: ನವದೆಹಲಿ ಹೈಕೋರ್ಟ್ ಮೇಲೆ ಬುಧವಾರ ಉಗ್ರರು ನಡೆಸಿದ ದಾಳಿ ಖಂಡಿಸಿ ಗುರುವಾರ ತಾಲ್ಲೂಕು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮೆರವಣಿಗೆ ನಡೆಸಿ ನೆಹರು ವೃತ್ತದಲ್ಲಿ ಭಯೋತ್ಪಾಕರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ವಿವಿಧ ನಗರಗಳಲ್ಲಿ ಬಾಂಬ್ ಸ್ಫೋಟದಂತಹ ಘಟನೆಗಳು ಪದೇಪದೇ ಮರುಕಳಿಸುತ್ತಿದ್ದರೂ ಕೇಂದ್ರ ಸರ್ಕಾರ ಇಂತಹ ಕೃತ್ಯಗಳನ್ನು ತಡೆಯುವಲ್ಲಿ ವಿಫಲವಾಗಿದೆ. ಗುಪ್ತಚರ ಇಲಾಖೆ ರಾಷ್ಟ್ರದ ಮೇಲೆ ಉಗ್ರಹ ಕೆಂಗಣ್ಣು ಬೀಳಲಿದೆ ಎಂಬ ಮುನ್ಸೂಚನೆ ನೀಡಿದ್ದರೂ ಗೃಹ ಇಲಾಖೆ ನಿರ್ಲಕ್ಷ್ಯದಿಂದ ಬಾಂಬ್ ಸ್ಫೋಟ ನಡೆದಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯುಪಿಎ ಮೈತ್ರಿಕೂಟದ ಮೃದು ಧೋರಣೆಯಿಂದ ಉಗ್ರರು ದೇಶದ ಮೇಲೆ ದಾಳಿ ನಡೆಸುತ್ತಿದ್ದಾರೆ. ಬಾಂಬ್ ನಡೆದ ಸಂದರ್ಭದಲ್ಲಿ ಮಾತ್ರ ಪ್ರಧಾನಿ ಸೇರಿದಂತೆ ಕೇಂದ್ರದ ನಾಯಕರು ಹೇಳಿಕೆಗಳನ್ನು ನೀಡುತ್ತಾರೆ. ಬದಲಾಗಿ ಉಗ್ರರ ಅಟ್ಟಹಾಸವನ್ನು ಹತ್ತಿಕ್ಕುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ. ಇದರಿಂದಾಗಿ ಜನತೆ ಆತಂಕದಲ್ಲಿ ಬದುಕುವಂತಾಗಿದೆ ಎಂದು ದೂರಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಸೋಮಶೇಖರ್ ಮಂಡೀಮಠ್, ಜಿಲ್ಲಾ ಪಂಚಾಯ್ತಿ ಸದಸ್ಯ ಜೆ.ಪಿ. ಜಯಪಾಲಯ್ಯ, ಸಿ. ಚಿತ್ರಲಿಂಗಪ್ಪ, ಬಿ.ಎಸ್. ಶಿವಪುತ್ರಪ್ಪ, ಬೋರಯ್ಯ, ಕೆ.ಟಿ. ಕುಮಾರಸ್ವಾಮಿ, ಟಿ.ಜೆ. ತಿಪ್ಪೇಸ್ವಾಮಿ, ಸಿ.ಎಸ್. ಪ್ರಸಾದ್, ಗುಜ್ಜಾರಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಪಾಲಯ್ಯ, ಭರತೇಶರೆಡ್ಡಿ, ಅಲ್ಲಾಭಕ್ಷಿ, ನಾಗರಾಜ, ರವೀಂದ್ರ ಪಾಲ್ಗೊಂಡಿದ್ದರು.
ಸರ್ಕಾರ ವಿಫಲ
ಹಿರಿಯೂರು: ದೇಶದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದೆ. ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ ದೆಹಲಿಯಲ್ಲಿ ಬುಧವಾರ ನಡೆದ ಬಾಂಬ್ ಸ್ಫೋಟ ತಡೆಯುವಲ್ಲಿ ದೆಹಲಿ ಹಾಗೂ ಯುಪಿಎ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ಗುರುವಾರ ತಾಲ್ಲೂಕು ಬಿಜೆಪಿ ನೇತೃತ್ವದಲ್ಲಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ದೇಶದ ಆತ್ಮಗೌರವದ ಸಂಕೇತವಾಗಿರುವ ಸಂಸತ್ ಮೇಲೆ ದಾಳಿ ನಡೆಸಿದ ಅಫ್ಜಲ್‌ಗುರು, ಮುಂಬೈ ದಾಳಿಕೋರ ಕಸಾಬ್‌ರನ್ನು ಗಲ್ಲಿಗೇರಿಸುವ ಬದಲು ಮುದ್ದುಮಕ್ಕಳನ್ನು ಸಲಹುವಂತೆ, ಐಷಾರಾಮಿ ಸೌಕರ್ಯ ನೀಡುತ್ತಿರುವ ಯುಪಿಎ ಸರ್ಕಾರದ ನೀತಿ ಸಂಶಯಾಸ್ಪದವಾಗಿದೆ. ಭಯೋತ್ಪಾದನೆ ಬಗ್ಗೆ ಕೇಂದ್ರ ಸರ್ಕಾರ ಮೃದು ಧೋರಣೆ ತಳೆದಷ್ಟೂ ಭಯೋತ್ಪಾದಕರು ತಮ್ಮ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ದೇಶದ ನಾಗರಿಕರ ಪ್ರಾಣಗಳು ಕಸಕ್ಕೆ ಕಡೆಯಾಗಿವೆ ಎಂದು ಮುಖಂಡರು ಆರೋಪ ಮಾಡಿದರು.
ಪಕ್ಷದ ತಾಲ್ಲೂಕು ಅಧ್ಯಕ್ಷ ಜಿ.ಸೋಮಶೇಖರ್, ಬೇಲಪ್ಪ, ಬಿ.ಕೆ. ತಿಪ್ಪೇಸ್ವಾಮಿ, ದಾದಾಪೀರ್, ವಿಶ್ವನಾಥಯ್ಯ, ಕೇಶವಮೂರ್ತಿ, ಎಂ.ಎಸ್. ರಾಘವೇಂದ್ರ, ಸರವಣನ್, ಪರಮೇಶ್ವರ, ಬಿ.ಆರ್. ರಂಗಸ್ವಾಮಿ, ರಾಮಾಂಜನೇಯ, ಕೆ. ಮಂಜುನಾಥ, ಆರ್. ವೆಂಕಟೇಶ್, ಬಸವರಾಜನಾಯಕ್, ಸಲೀಂ, ಪರಮೇಶ್ವರಾಚಾರ್, ತಿಮ್ಮರಾಜಯಾದವ್, ಬಾಬುಲಾಲ್‌ಬಲಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.