ಚಳ್ಳಕೆರೆ: ಈರುಳ್ಳಿ ಬೀಜ ಬಿತ್ತನೆ ಮಾಡಿ ಕಟಾವಿನ ಅವಧಿ ಮುಗಿದರೂ ಸರಿಯಾಗಿ ಬೆಳೆ ಬಾರದೆ ನಷ್ಟವಾಗಿದೆ ಎಂದು ಅಲವತ್ತುಕೊಂಡ ರೈತರ ಜಮೀನುಗಳಲ್ಲಿ ಬೆಳೆಯನ್ನು ಪರಿಶೀಲಿಸಿದ ಅಧಿಕಾರಿಗಳು ನಷ್ಟವಾಗಿರುವುದಕ್ಕೆ ಕಾರಣ ಏನೆಂದು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ನಂತರ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ತಾಲ್ಲೂಕಿನ ಚಿಕ್ಕಮದುರೆ, ಸೋಮಗುದ್ದು, ಉಪ್ಪಾರಹಟ್ಟಿ, ಗ್ರಾಮಗಳಲ್ಲಿ ಈರುಳ್ಳಿ ಬೆಳೆ ನಷ್ಟಕ್ಕೀಡಾದ ರೈತರ ಜಮೀನುಗಳಿಗೆ ಗುರುವಾರ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಕೃಷ್ಣಮೂರ್ತಿ ರೈತರಿಂದ ಮಾಹಿತಿ ಪಡೆದ ನಂತರ ಮಾತನಾಡಿ, ಈರುಳ್ಳಿ ಬೀಜ ಬಿತ್ತನೆ
ಮಾಡುವಾಗ ಅನುಸರಿಸಿರುವ ಪದ್ಧತಿಗಳು ಹಾಗೂ ಬೀಜದ ತಳಿಗಳನ್ನು ಪರೀಕ್ಷಿಸಿದ ನಂತರ ಬೆಳೆ ನಷ್ಟವಾಗಿರುವುದಕ್ಕೆ ಕಾರಣ ತಿಳಿದುಬರುತ್ತದೆ. ಒಂದು ವೇಳೆ ಕಳಪೆ ಬೀಜದಿಂದ ಬೆಳೆ ನಷ್ಟವಾಗಿದ್ದರೆ ಕಂಪೆನಿ ವಿರುದ್ಧ ಕ್ರಮ ಜರುಗಿಸಲಾಗುವುದು. ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಸಹ ಒದಗಿಸಲಾಗುವುದು ಎಂದರು.
ರೈತರ ಒತ್ತಾಯದ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದ, ಬಿತ್ತನೆ ಬೀಜ ಮಾರಾಟ ಮಾಡಿರುವ ವಿನಾಯಕ ಫರ್ಟಿಲೈಸರ್ಸ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು, ‘ಮಾಹಿತಿಗಾಗಿ ಸಂಪರ್ಕಿಸಿದರೆ ಬೇಜವಾಬ್ದಾರಿಯಿಂದ ವರ್ತಿಸುತ್ತೀರಾ. ಬಿತ್ತನೆ ಬೀಜಗಳನ್ನು ಮಾರಾಟ ಮಾಡುವಾಗ ಲಾಭ ಪಡೆಯುವ ನೀವು ಬೆಳೆ ನಷ್ಟವಾಗಿರುವುದಕ್ಕೆ ಕಾರಣ ಕೇಳಿದರೆ ಹಾರಿಕೆ ಉತ್ತರ ಕೊಡುವುದು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.
ಬಿತ್ತನೆ ಬೀಜಗಳನ್ನು ಹಾಗೂ ನಷ್ಟಕ್ಕೀಡಾಗಿರುವ ಈರುಳ್ಳಿ ಬೆಳೆಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸ ಲಾಗುವುದು. ನಂತರ ಕಳಪೆ
ಬೀಜಗಳು ಮಾರಾಟವಾಗಿರುವುದು ದೃಢಪಟ್ಟರೆ ಪರಿಹಾರವನ್ನು ಕಂಪೆನಿ ಕಟ್ಟಿಕೊಡ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ದೇವರಾಜ, ಸಹಾಯಕ ತೋಟಗಾರಿಕಾ ನಿರ್ದೇಶಕ ರವಿ, ಈರುಳ್ಳಿ ಬೆಳೆ ತಜ್ಞ ಈರೇಗೌಡ, ತೋಟಗಾರಿಕೆ ಸಹಾಯಕ ಅಧಿಕಾರಿಗಳಾದ ಎಂ.ಕಲ್ಲಪ್ಪ, ಇಂದೂಧರ, ಮಂಜುನಾಥ, ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮತ್ತಿತರರು
ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.