ADVERTISEMENT

ನೀರಿನ ಬವಣೆ; ಮತದಾನ ಬಹಿಷ್ಕಾರದ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 8:59 IST
Last Updated 14 ಏಪ್ರಿಲ್ 2013, 8:59 IST

ಚಿಕ್ಕಜಾಜೂರು: ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿಲ್ಲದೇ ಪರದಾಡುತ್ತಿರುವ ಕಾಳಘಟ್ಟ ಲಂಬಾಣಿ ಹಟ್ಟಿ ಗ್ರಾಮಸ್ಥರು ಶನಿವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಸಮೀಪದ ಕಾಳಘಟ್ಟ ಲಂಬಾಣಿ ಹಟ್ಟಿ ಗ್ರಾಮದಲ್ಲಿ ಸುಮಾರು 120 ಮನೆಗಳಿದ್ದು, ಸುಮಾರು 750ಕ್ಕೂ ಹೆಚ್ಚು ಜನಸಂಖ್ಯೆ ಹಾಗೂ ಸಾವಿರಾರು ದನ-ಕರುಗಳಿವೆ. ಕಳೆದ ಎರಡು ತಿಂಗಳಿಂದ ಕುಡಿಯುವ ನೀರಿಲ್ಲದೆ, ಇಡೀ ಗ್ರಾಮದ ಜನತೆ ದೂರದ ತೋಟಗಳಿಗೆ ಅಲೆದಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ನಾವು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ರೂಪ್ಲಿಬಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

600 ಅಡಿ ಆಳದವರೆಗೂ ಕೊಳವೆ ಬಾವಿಯನ್ನು ತೋಡಿದರೂ ನೀರು ಇಲ್ಲದಂತಾಗಿದೆ. ಎರಡು ವರ್ಷಗಳ ಹಿಂದೆ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. ಆದರೆ, ಅದು ಕೇವಲ ತೋರಿಕೆಗೆ ಇದೆ ಅಷ್ಟೆ, ಇದುವರೆಗೂ ಅದಕ್ಕೆ ನೀರನ್ನು ಹಾಯಿಸಿಲ್ಲ. ಸರ್ಕಾರ ಜನರಿಗೆ ಜೀವನಾವಶ್ಯಕವಾಗಿ ಬೇಕಾಗಿರುವ ನೀರನ್ನೇ ಒದಗಿಸದಿದ್ದರೆ ಹೇಗೆ? ಎಂಬುದು ಗ್ರಾಮಸ್ಥರ ಪ್ರಶ್ನೆ.

ಮತದಾನ ಬಹಿಷ್ಕಾರದ ಎಚ್ಚರಿಕೆ: ಗ್ರಾಮದಲ್ಲಿ ಮೂಲಸೌಕರ್ಯಗಳಿಲ್ಲ. ಸರಿಯಾದ ರಸ್ತೆಗಳಿಲ್ಲದೆ ಮಕ್ಕಳು ಶಾಲೆಗೆ ಹೋಗುವುದು ಕಷ್ಟವಾಗಿದೆ. ಇನ್ನೆರಡು ದಿನಗಳಲ್ಲಿ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಸಬೇಕು. ಇಲ್ಲದಿದ್ದರೆ ಗ್ರಾಮದಿಂದ ಯಾವುದೇ ಪಕ್ಷಕ್ಕೆ ಮತ ಚಲಾಯಿಸುವುದಿಲ್ಲ. ಜತೆಗೆ ಇಡೀ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಗ್ರಾಮದ ಧನಂಜಯ, ರಮೇಶ್, ಲೋಕ್ಯಾನಾಯ್ಕ, ರೂಪ್ಲಾನಾಯ್ಕ, ಕುಮಾರ ನಾಯ್ಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.