ADVERTISEMENT

ಬಿ.ಎಲ್. ರೈಸ್‌ಗೆ ಕೀರ್ತಿ ತಂದ ಅಶೋಕನ ಶಾಸನ

ಚಿತ್ರದುರ್ಗ ಇತಿಹಾಸ ಕೂಟದ ಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸಮೂರ್ತಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 8:28 IST
Last Updated 11 ಡಿಸೆಂಬರ್ 2017, 8:28 IST
ಡಾ.ಎಸ್.ಎಲ್.ಶ್ರೀನಿವಾಸಮೂರ್ತಿ
ಡಾ.ಎಸ್.ಎಲ್.ಶ್ರೀನಿವಾಸಮೂರ್ತಿ   

ಚಿತ್ರದುರ್ಗ: ಮೊಳಕಾಲ್ಮುರು ತಾಲೂಕಿನ ಸಿದ್ಧಾಪುರದಲ್ಲಿ ಪತ್ತೆಯಾದ ಅಶೋಕನ ಮೂರು ಶಾಸನಗಳು ಬಿ.ಎಲ್. ರೈಸ್ ಅವರಿಗೆ ಕೀರ್ತಿ ತಂದುಕೊಟ್ಟಿವೆ ಎಂದು ಬೆಂಗಳೂರಿನ ಬಸವನಗುಡಿಯ ವಿಜಯ ವಿಭಜಿತ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಸ್.ಎಲ್.ಶ್ರೀನಿವಾಸಮೂರ್ತಿ ಪ್ರತಿಪಾದಿಸಿದರು.

ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ವಾಲ್ಮೀಕಿ ಸಾಹಿತ್ಯ ಸಂಪದ ಹರ್ತಿಕೋಟೆ ಸಹಯೋಗದೊಂದಿಗೆ ನಗರದ ಐಎಂಎ ಹಾಲ್‌ನಲ್ಲಿ ಭಾನುವಾರ ನಡೆದ ‘ಬಿ.ಎಲ್.ರೈಸ್ ಕಂಡ ಚಿತ್ರದುರ್ಗ’ ವಿಷಯ ಕುರಿತ ಉಪನ್ಯಾಸದಲ್ಲಿ ಉಲ್ಲೇಖಿಸಿದರು.

ಅಶೋಕನ ಶಾಸನಗಳನ್ನು ಪತ್ತೆ ಹಚ್ಚಿದಾಗ ರೈಸ್ ಅವರಿಗೆ ದೇಶದ ಬೇರೆ ಬೇರೆ ಕಡೆಗಳಿಂದ ಹೊಗಳಿಕೆಯ ಪ್ರಶಂಸನೀಯ ಪತ್ರಗಳು ಬಂದವು. ಅದರ ನಂತರದಲ್ಲೂ ಚಿತ್ರದುರ್ಗ ಜಿಲ್ಲೆಯಲ್ಲಿ ಅವರು ಸಾಕಷ್ಟು ಸಂಶೋಧನೆಗಳನ್ನು ಕೈಗೊಂಡಿದ್ದರು. 1900ರಲ್ಲಿ ಅವರು ಪ್ರಕಟಿಸಿದ ಇನ್ಸ್‌ಕ್ರಿಪ್ಷನ್ ಬುಕ್‌ನಲ್ಲಿ ಎರಡು ಶಾಸನಗಳ ಬಗ್ಗೆ ಮಾಹಿತಿ ಇದೆ ಎಂದು ಉದಾಹರಿಸಿದರು.

ADVERTISEMENT

ಇಂಗ್ಲಿಷಿನವರಾದ ಬಿ.ಎಲ್.ರೈಸ್ ತಮ್ಮ ಕಾರ್ಯ ಆರಂಭಿಸಿದ್ದು ಮೈಸೂರು ಸಂಸ್ಥಾನದಲ್ಲಿನ ಪುರಾತತ್ವ ಇಲಾಖೆಯ ನಿರ್ದೇಶಕರಾಗಿ ಸುಮಾರು 600 ಕ್ಕೂ ಹೆಚ್ಚು ಶಾಸನಗಳನ್ನು ಮೊಟ್ಟ ಮೊದಲ ಬಾರಿಗೆ ಪ್ರಕಟಿಸಿದ ಕೀರ್ತಿ ರೈಸ್‌ ಅವರಿಗೆ ಸಲ್ಲುತ್ತದೆ ಎಂದರು.

1892ರಲ್ಲಿ ಸಂಶೋಧನೆ ಆರಂಭಿಸಿದ ಬಿ.ಎಲ್.ರೈಸ್ ಹರಿಹರದ ದೇವಸ್ಥಾನ ಮತ್ತು ಅಲ್ಲಿರುವ ಶಾಸನಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ‘ದೇವಸ್ಥಾನದ ಸೌಂದರ್ಯ ರಕ್ಷಣೆಯಾಗಬೇಕಾದರೆ ದೇವಸ್ಥಾನದ ಸುತ್ತ ಜನವಸತಿ ಇಲ್ಲದಂತೆ ಮಾಡಬೇಕು. ಹಾಗೆಯೇ ಒತ್ತುವರಿಯಾಗುವುದನ್ನು ತಪ್ಪಿಸಬೇಕು’ ಎಂದು ಅವರು ತಮ್ಮ ಸಂಶೋಧನಾ ವರದಿಯೊಂದರಲ್ಲಿ ಉಲ್ಲೇಖಿಸಿದ್ದರು.

ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಪ್ರೊ.ಲಕ್ಷ್ಮಣ್‌ತೆಲಗಾವಿ, ಸಾಹಿತಿ ಬಿ.ಎಲ್.ವೇಣು, ಮೀರಾಸಾಬಿಹಳ್ಳಿ ಶಿವಣ್ಣ, ಯಶೋದಾ ಬಿ.ರಾಜಶೇಖರಪ್ಪ ಒಳಗೊಂಡಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿ.ರಾಜಶೇಖರಯ್ಯ ಪ್ರಾರ್ಥಿಸಿದರು. ಡಾ.ಬಿ.ಕೃಷ್ಣಪ್ಪ ತಿಪ್ಪಣ್ಣಮರಿಕುಂಟೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.