ADVERTISEMENT

ಮಂಗಳೂರು ಫರ್ಟಿಲೈಸರ್‌ನಿಂದ ಶಾಲೆಗಳಿಗೆ ಪ್ರಮಾಣಪತ್ರ, ಮಕ್ಕಳಿಗೆ ಬ್ಯಾಗ್, ತಟ್ಟೆ, ಲೋಟ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 10:40 IST
Last Updated 25 ಮಾರ್ಚ್ 2012, 10:40 IST

ಚಿತ್ರದುರ್ಗ: ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ ಕಂಪೆನಿ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ಮಂಗಳ ಅಕ್ಷರ ಮಿತ್ರ ಯೋಜನೆ ಅಡಿ 45 ಸರ್ಕಾರಿ ಶಾಲೆಗಳ ಮಕ್ಕಳಿಗೆ ರೂ 1 ಕೋಟಿ ವೆಚ್ಚದಲ್ಲಿ ಪೀಠೋಪಕರಣ ಹಾಗೂ ಬ್ಯಾಗ್ ಸೇರಿದಂತೆ  ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಕಂಪೆನಿಯ ಪ್ರಧಾನ ವ್ಯವಸ್ಥಾಪಕ ಸುಬ್ರಹ್ಮಣ್ಯಭಟ್ ತಿಳಿಸಿದರು.

ಬುಧವಾರ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಹಾಗೂ ಕೆಂಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಪೀಠೋಪಕರಣ, ಮಕ್ಕಳಿಗೆ ಬ್ಯಾಗ್, ತಟ್ಟೆ, ಲೋಟವನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಆಗಲೆಂದು ಅವರಿಗೆ ಬೇಕಾದ ಪರಿಕರಗಳನ್ನು ಮತ್ತು ಶಿಕ್ಷಕರಿಗೆ ಅಗತ್ಯವಿರುವ ಕುರ್ಚಿಗಳನ್ನು ನೀಡಲಾಗಿದೆ.
 
ಕಳೆದ ಎರಡು ವರ್ಷದಲ್ಲಿ ನಮ್ಮ ಕಂಪೆನಿಯ ಸೌಲಭ್ಯಗಳು 10 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತಲುಪಿವೆ. ಯಾವುದೇ ಶಾಲೆಗೆ ನಗದು ರೂಪದಲ್ಲಿ ಹಣ ನೀಡುವುದಿಲ್ಲ. ಸರ್ಕಾರಿ ಶಾಲೆಗಳಿಗಿರುವ ಕೊರತೆಯನ್ನು ನೀಗಿಸಿ ದೂರದ ಖಾಸಗಿ ಶಾಲೆಗಳಿಗೆ ಕಳುಹಿಸುವ ಪಾಲಕರ ಹೊರೆ ಕಡಿಮೆ ಮಾಡುವುದು ನಮ್ಮ ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಶಾಲೆಗಳಲ್ಲದೆ ಉತ್ತರಕನ್ನಡ, ಕೋಲಾರ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ಆದಿವಾಸಿಗಳಿಗೂ ಸೋಲಾರ್ ಲೈಟ್, ಕಂಬಳಿಗಳು, ಗೃಹ ಬಳಕೆಯ ವಸ್ತುಗಳನ್ನು ಕಂಪನಿಯಿಂದ ಕೊಡುಗೆಯಾಗಿದೆ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಟಿ. ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಂಗಳೂರು ಫರ್ಟಿಲೈಸರ್ ಕಂಪನಿಯು ಗ್ರಾಮಾಂತರ ಪ್ರದೇಶದಲ್ಲಿನ ಸರ್ಕಾರಿ ಶಾಲೆ ಮಕ್ಕಳಿಗೆ ಸಹಾಯ ಮಾಡುತ್ತಿರುವುದು ಸಂತಸದ ವಿಷಯವಾಗಿದೆ. ಶಾಲಾ ಮಕ್ಕಳು ಇಂತಹ ಸೌಲಭ್ಯಗಳ ಬಳಕೆ ಮಾಡಿಕೊಂಡು ಉತ್ತಮವಾಗಿ ವ್ಯಾಸಂಗ ಮಾಡಬೇಕು ಎಂದರು.

 ಎಸ್‌ಡಿಎಂಸಿ ಅಧ್ಯಕ್ಷ ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಭಾರತಿ ಕಲ್ಲೇಶ್,  ಜಿ.ಪಂ. ಸದಸ್ಯರಾದ ಅನಿಲ್ ಕುಮಾರ್, ಪಿ.ಆರ್. ಶಿವಕುಮಾರ್, ಎಂ.ಸಿ.ಎಫ್. ಮಾರಾಟ ಅಧಿಕಾರಿ ನವೀನ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್. ಮಂಜುನಾಥ್ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಯುವರಾಜ್‌ಗೌಡ ಹಾಗೂ ವಿವಿಧ ಮುಖಂಡರು ಉಪಸ್ಥಿತರಿದ್ದರು.ಉಪ ವ್ಯವಸ್ಥಾಪಕ ಪಿ. ಪುಟ್ಟಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.