ADVERTISEMENT

ಮಾನವೀಯತೆ ಬಿಂಬಿಸಿದ ಶರಣ ಸಂಸ್ಕೃತಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 4:35 IST
Last Updated 22 ಅಕ್ಟೋಬರ್ 2012, 4:35 IST

ಚಿತ್ರದುರ್ಗ: ಶರಣ ಸಂಸ್ಕೃತಿಯು ಭಾರತೀಯ ಸಂಸ್ಕೃತಿಯ ನೆಲೆಗಟ್ಟಿನಂತೆ ಗಟ್ಟಿಯಾಗಿ ನೆಲೆಯೂರಿದೆ. 12ನೇ ಶತಮಾನದಲ್ಲಿದ್ದ ಬಸವಣ್ಣನವರ ವಿಚಾರಧಾರೆ ಈಗಿನ ಶರಣರಿಂದಾಗಿ ಪ್ರಸ್ತುತ 21ನೇ ಶತಮಾನಕ್ಕೂ ಅಗತ್ಯವಾಗಿದೆ ಎಂದು ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿ ಸ್ವಾಮಿ ನುಡಿದರು.

ಮುರುಘಾಮಠದಲ್ಲಿ ಭಾನುವಾರ ನಡೆದ ಸಹಜ ಶಿವಯೋಗದಲ್ಲಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ, ಶರಣ ಸಂಸ್ಕೃತಿ ಮತು ಪಾಶ್ಚಿಮಾತ್ಯ ಸಂಸ್ಕೃತಿ ಈ ಮೂರನ್ನು ತಾಳೆ ಹಾಕಿದಾಗ, ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಕಾರ ಭೋಗ ಭಾಗ್ಯ, ಐಷಾರಾಮಿ ಜೀವನ ಶೈಲಿಯಲ್ಲಿ ಮಾನವತೆಯನ್ನು ಮರೆತು ಬದುಕುತಿದ್ದೇವೆ. ಆದರೆ, ಶರಣ ಸಂಸ್ಕೃತಿ ಕಾಯಕ ಸಂಸ್ಕೃತಿ ಬಿಂಬಿಸುವ ಮೂಲಕ ಭಾರತೀಯ ಸಂಸ್ಕೃತಿಯಂತೆ ನೆಲೆಯೂರಿದೆ ಎಂದರು.

ಮಾಯಕೊಂಡ ಶಾಸಕ ಬಸವರಾಜ ನಾಯ್ಕ ಮಾತನಾಡಿ, ಪೂರ್ವಜರ ಪದ್ಧತಿಗಳನ್ನು ಕೈಬಿಟ್ಟಿದ್ದರಿಂದ  ಭೀಕರ ಬರಗಾಲದಂತ ಸನ್ನಿವೇಶಗಳು ಕಾಡುತ್ತಿವೆ. 100ರಿಂದ 800ಅಡಿ ಕೊರೆದರೂ ನೀರು ದೊರೆಯದೆ ಎಲ್ಲೆಡೆ ಹಾಹಾಕಾರ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ನಿವೃತ್ತ ಪೋಲಿಸ್ ಅಧಿಕಾರಿ ಬಿ.ಕೆ. ಶಿವರಾಂ ಮಾತನಾಡಿ, ಮಾನವ ರೂಢಿಸಿಕೊಂಡಿರುವ ಅನಿಷ್ಠ ಪದ್ಧತಿಯಲ್ಲಿ ಭೂಕಬಳಿಕೆಯೂ ಒಂದು ದುರಂತ. ಎಲ್ಲರೂ ದುರಾಲೋಚನೆ, ಸ್ವಾರ್ಥ ಮನೋಭಾವ ಬೆಳಸಿಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಜಯದೇವಸ್ವಾಮೀಜಿ, ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಟಿ. ನರಸೀಪುರ ನಳಂದ ಬುದ್ಧವಿಹಾರದ ಬಂತೆ ಬೋಧಿರತ್ನ, ಅಥಣಿಯ ದಾನಮ್ಮದೇವಿ ಪಾದಯಾತ್ರೆ ಸಮಿತಿ ಅಧ್ಯಕ್ಷ ಶಿವಾನಂದ ದಿವಾನ್ಮಳ್ ಉಪಸ್ಥಿತದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.