ADVERTISEMENT

ಮೂಲ ಸೌಕರ್ಯಕ್ಕೆ ಮೊದಲ ಚಿಂತನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 5:30 IST
Last Updated 22 ಜನವರಿ 2011, 5:30 IST

ಚಳ್ಳಕೆರೆ: ತಾಲ್ಲೂಕಿನ ಪ್ರತಿಷ್ಠಿತ ಜಿಲ್ಲಾ ಪಂಚಾಯ್ತಿ ಕ್ಷೇತ್ರ ಎಂದೇ ಎಲ್ಲರ ಗಮನ ಸೆಳೆದಿದ್ದ ದೊಡ್ಡೇರಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪೊಲೀಸ್ ಅಧಿಕಾರಿ ಎಚ್. ಆಂಜನೇಯ ಅವರ ಪುತ್ರ ಎ. ಅನಿಲ್‌ಕುಮಾರ್ ಆಯ್ಕೆಯಾಗಿದ್ದಾರೆ.

ರಾಜಕೀಯ ಕ್ಷೇತ್ರಕ್ಕೆ ಇದೀಗ ಪಾದಾರ್ಪಣೆ ಮಾಡಿರುವ ಇವರು ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ. ಅವರು ‘ಪ್ರಜಾವಾಣಿ’ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

* ರಾಜಕೀಯಕ್ಕೆ ಬರಲು ಕಾರಣ ಏನು?
ಮೊದಲಿನಿಂದಲೂ ರಾಜಕೀಯವೇ ನನ್ನ ಆಸಕ್ತಿಯ ಕ್ಷೇತ್ರವಾಗಿತ್ತು. ಮೂಲತಃ ದೊಡ್ಡೇರಿ ಕ್ಷೇತ್ರದವನಾದ ನಾನು ಈ ಬಾರಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ಬಂದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಸಲುವಾಗಿ ಸ್ಪರ್ಧಿಸಿದೆ. ಕ್ಷೇತ್ರದ ಜನತೆಯ ಬೆಂಬಲ ಹಾಗೂ ಮಾಜಿ ಸಚಿವ ಡಿ. ಸುಧಾಕರ್ ಕೃಪಾಕಟಾಕ್ಷದಿಂದ ಗೆದ್ದು ಬಂದಿದ್ದೇನೆ.

* ಕ್ಷೇತ್ರದ ಸಮಸ್ಯೆಗಳ ಬಗ್ಗೆ ಏನು ಹೇಳುತ್ತೀರಿ?
ದೊಡ್ಡೇರಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರಸ್ತೆ, ಶಾಲಾ ಕೊಠಡಿಗಳ ದುರಸ್ತಿ, ಕುಡಿಯುವ ನೀರಿನ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಮೊದಲು ಮೂಲ ಸೌಕರ್ಯಗಳನ್ನು ಒದಗಿಸಲು ಶ್ರಮಿಸುತ್ತೇನೆ.

* ಇಷ್ಟು ದಿನಗಳ ಕಾಲ ಬೇರೆಡೆ ವಾಸಿಸುತ್ತಿದ್ದ ನೀವು ಇನ್ನು ಮುಂದೆ ಕ್ಷೇತ್ರದ ಜನತೆಗೆ ಸಿಗುತ್ತೀರಾ?
ಖಂಡಿತ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ನಾನು ವಾಸಿಸುತ್ತೇನೆ. ತಂದೆಯವರ ಸರ್ಕಾರಿ ಕೆಲಸದಿಂದಾಗಿ ಬೇರೆಡೆ ವಾಸಿಸುತ್ತಿದ್ದುದು ನಿಜ. ಇನ್ನುಮುಂದೆ ಜನರ ಸೇವೆ ಮಾಡಲು ಸದಾ ಸಿದ್ಧನಿದ್ದೇನೆ.

* ಮೊದಲ ಚುನಾವಣೆ ಏನನ್ನಿಸಿತು?
ನಮ್ಮ ಊರಿನವರು ಹಾಗೂ ಕ್ಷೇತ್ರದ ಮುಖಂಡರ ಮುಂದಾಳತ್ವದಲ್ಲಿ ಚುನಾವಣೆ ಮಾಡಿರುವ ನನಗೆ ಹಿರಿಯರ ಆಶೀರ್ವಾದ ಹಾಗೂ ಕಾರ್ಯಕರ್ತರ ಬೆಂಬಲ ಸಿಕ್ಕಿದ್ದರಿಂದ ಚುನಾವಣೆ ನನಗೆ ಹೊಸತಾದ ಅನುಭವ ನೀಡಿದೆ. ಹಿರಿಯ ಮುಖಂಡರ ಮಾರ್ಗದರ್ಶನದಂತೆ ಪ್ರಚಾರ ಕಾರ್ಯದಲ್ಲಿ ನಿರತನಾಗಿದ್ದರಿಂದ ಈ ಚುನಾವಣೆ ನನ್ನ ಜೀವನದಲ್ಲಿ ಮರೆಯಲಾರೆ.

* ಅಭಿವೃದ್ಧಿ ಕುರಿತ ಮುಂದಿನ ಯೋಜನೆಗಳು ಏನು?
ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮಹದಾಸೆ ನನ್ನದು. ಆದಷ್ಟು ಶಾಲಾ ಕೊಠಡಿ, ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಮೂಲ ಸೌಕರ್ಯಗಳಿಂದ ನನ್ನ ಕ್ಷೇತ್ರದ ಜನತೆಯನ್ನು ವಿಮುಕ್ತಿಗೊಳಿಸುವುದೇ ನನ್ನ ಗುರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.