ADVERTISEMENT

ಮೇಗಲಹಟ್ಟಿ: ಸಾಂಕ್ರಾಮಿಕ ರೋಗ ಹತೋಟಿಗೆ

ಮೊಳಕಾಲ್ಮುರು: 49 ಜನರಿಗೆ ಜ್ವರ ಲಕ್ಷಣ, 6 ಮನೆಗಳಲ್ಲಿ ಸೊಳ್ಳೆ ಲಾರ್ವಾ ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 5:49 IST
Last Updated 16 ಫೆಬ್ರುವರಿ 2017, 5:49 IST
ಮೊಳಕಾಲ್ಮುರು: ತೀವ್ರ ಸಾಂಕ್ರಾಮಿಕ ರೋಗ ಲಕ್ಷಣಗಳು ಕಾಣಿಸಿಕೊಂಡು, ಆತಂಕದಲ್ಲಿದ್ದ ತಾಲ್ಲೂಕಿನ ಮೇಗಲಹಟ್ಟಿಯಲ್ಲಿ ಜನರು ತುಸು ನಿರಾಳವಾಗಬಹುದು. ಸಾಂಕ್ರಾಮಿಕ ರೋಗ ಪ್ರಕರಣಗಳು ಈಗ ಹತೋಟಿಗೆ ಬಂದಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
 
ಗ್ರಾಮದಲ್ಲಿ 20–25 ದಿನಗಳಿಂದ ಸಾಂಕ್ರಾಮಿಕ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ 136 ಮನೆಗಳಲ್ಲಿನ ನೀರಿನ ಸಂಗ್ರಹದ ಪ್ರಮಾಣವನ್ನು ಸರ್ವೆ ಮಾಡಿದ್ದು, 6 ಮನೆಗಳಲ್ಲಿ ಸೊಳ್ಳೆಗಳ ಲಾರ್ವಾ ಪತ್ತೆಯಾಗಿದೆ. 4 ಕುಡಿಯುವ ನೀರಿನ ಸಂಗ್ರಹಣೆ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಒಂದು ಸಂಗ್ರಹಣಾ ಕೇಂದ್ರದ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ ಎಂದು ಚಿಕಿತ್ಸೆ ನೇತೃತ್ವ ವಹಿಸಿರುವ ವೈದ್ಯಾಧಿಕಾರಿ ಡಾ. ನಂದಿನಿ ಕಡಿ ತಿಳಿಸಿದರು.
 
ಪ್ರಕರಣದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ನೀರಿನ ಶುಚಿತ್ವ ಹಾಗೂ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ಜ್ವರ ಕಂಡುಬಂದವರಿಗೆ ರಕ್ತ ಪರೀಕ್ಷೆ ಮಾಡಿಸಲಾಗುತ್ತಿದೆ. ಕಡ್ಡಾಯವಾಗಿ ಕಾಯಿಸಿ ಆರಿಸಿದ ಶುದ್ಧ ನೀರು ಕುಡಿಯುವಂತೆ ಮನವಿ ಮಾಡಲಾಗಿದೆ. ಈವರೆಗೆ ಸೊಳ್ಳೆ ನಿಯಂತ್ರಣಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲಿ ‘ಫಾಗಿಂಗ್‌’ ಮಾಡಲಾಗುತ್ತಿತ್ತು. ಮಂಗಳವಾರದಿಂದ ಮನೆಗಳ ಒಳಭಾಗದಲ್ಲಿಯೂ ಮಾಡಲಾಗುತ್ತಿದೆ ಎಂದರು.
 
ಜ್ವರ ಕಾಣಿಸಿಕೊಂಡ ಒಟ್ಟು 49 ಜನರ ರಕ್ತ ಪರೀಕ್ಷೆ ಮಾಡಿಸಲಾಗಿದ್ದು, ಒಂದೂ ಡೆಂಗಿ ಪ್ರಕರಣ ಪತ್ತೆಯಾಗಿಲ್ಲ. ಒಂದು ‘ಟೈಫಾಯಿಡ್‌’ ಪ್ರಕರಣ ದೃಢಪಟ್ಟಿದೆ. ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಸ್ಥಾಪಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
 
ತಾಲ್ಲೂಕು ಪಂಚಾಯ್ತಿ ಇಒ ಸಿ.ಎನ್‌. ಚಂದ್ರಶೇಖರ್‌್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ. ರುದ್ರಮುನಿ, ವೈದ್ಯರಾದ ಡಾ. ರಮೇಶ್‌್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ಗಾದ್ರಿ ಪಾಲನಾಯಕ, ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಕ ರಂಗನಾಥ ರೆಡ್ಡಿ, ಶ್ರೀನಿವಾಸ್‌, ಶ್ರೀನಿವಾಸ ಮಳಲಿ, ನಾಗರಾಜ್‌, ಪಾಂಡು, ರೆಹಮಾನ್‌, ಶಿವಕುಮಾರ್‌, ಪಂಚಾಯ್ತಿ ಪಿಡಿಒ ಕರಿಬಸಪ್ಪ ಉಪಸ್ಥಿತರಿದ್ದರು. ಗ್ರಾಮದಲ್ಲಿ ತೀವ್ರ ಜ್ವರ ಪ್ರಕರಣಗಳು ಕಂಡುಬಂದಿರುವ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿಯನ್ನು ಪ್ರಕಟಿಸಿತ್ತು. 
 
* ಗ್ರಾಮದಲ್ಲಿ ಪರಿಸ್ಥಿತಿ ಸುಧಾರಿಸುವ ತನಕ ಜಾತ್ರೆ  ಮುಂದೂಡಲು ಮನವಿ ಮಾಡ ಲಾಗಿದೆ. ಡಂಗೂರ ಹೊಡೆಸಿ ಮಾಹಿತಿ  ನೀಡಲು ಪಂಚಾಯ್ತಿಗೆ ಸೂಚಿಸಲಾಗಿದೆ.
– ಚಂದ್ರಶೇಖರ್, ಇಒ, ತಾಲ್ಲೂಕು ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.