ಹಿರಿಯೂರು: 2012-13ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಅಡಿಯಲ್ಲಿ ಎಲ್ಲಾ ರೈತರು ಹೋಬಳಿಮಟ್ಟದಲ್ಲಿ ಆಯ್ದ ಬೆಳೆಗಳಿಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕಟ್ಟಾ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ಬೆಳೆ ಸಾಲ ಪಡೆಯದ ರೈತರು, ಬೆಳೆ ಬಿತ್ತಿದ/ನಾಟಿ ಮಾಡಿದ ನಂತರ 30 ದಿನಗಳ ಒಳಗೆ ಅಥವಾ ಎಳ್ಳು (ಮಳೆ ಆಶ್ರಿತ) ಬೆಳೆಗೆ ಜುಲೈ 31 ಮತ್ತು ಇತರೆ ಬೆಳೆಗಳಿಗೆ ಆ. 31ರ ಒಳಗೆ ಯಾವುದು ಮುಂಚೆಯೋ ಆ ಅವಧಿಯೊಳಗೆ ಬ್ಯಾಂಕಿಗೆ ಘೋಷಣೆಗಳನ್ನು ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಬೆಳೆ ಸಾಲ ಪಡೆಯುವ ರೈತರನ್ನು ಈ ಯೋಜನೆಯಡಿ ಎಲ್ಲಾ ಬೆಳೆಗಳಿಗೆ ಈ ವರ್ಷದ ಏ.1ರಿಂದ ಸೆ. 30ರ ಒಳಗೆ ಕಡ್ಡಾಯವಾಗಿ ಒಳಪಡಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಾಯೋಗಿಕ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅಡಿ 2012 ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆ ಪತ್ರಗಳನ್ನು ಜೂನ್ 30ರ ಒಳಗೆ ಸಲ್ಲಿಸಬೇಕು. ಬೆಲೆ ಸಾಲ ಪಡೆದ ರೈತರು ಜುಲೈ 31ರ ಒಳಗೆ ನೋಂದಾಯಿಸಬೇಕು. ಹೆಚ್ಚಿನ ವಿವರಕ್ಕೆ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2012-13ನೇ ಸಾಲಿನ ಸುವರ್ಣಭೂಮಿ ಯೋಜನೆ: ಜಿಲ್ಲಾಧಿಕಾರಿ ಆದೇಶದ ಮೇರೆಗೆ ಹಿರಿಯೂರು ತಾಲ್ಲೂಕಿನಲ್ಲಿ 2012-13ನೇ ಸಾಲಿನ ಸುವರ್ಣ ಭೂಮಿ ಯೋಜನೆ ಅಡಿಯಲ್ಲಿ ತಾಲ್ಲೂಕಿಗೆ ನಿಗದಿಪಡಿಸಿರುವ ಗುರಿ ಅನುಸಾರ ಫಲಾನುಭವಿಗಳನ್ನು ಆಯ್ಕೆ ಮಾಡಲು 2011-12ನೇ ಸಾಲಿನಲ್ಲಿ ವಿಲೇವಾರಿಯಾಗದೆ ಬಾಕಿ ಇರುವ ಅರ್ಜಿಗಳಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಜೂನ್ 21ರಂದು ಧರ್ಮಪುರ ಹೋಬಳಿಯಲ್ಲಿ ಧರ್ಮಪುರದ ರೈತ ಸಂಪರ್ಕ ಕೇಂದ್ರ, ಐಮಂಗಲ ಹೋಬಳಿಯಲ್ಲಿ ಐಮಂಗಲದ ರೈತ ಸಂಪರ್ಕ ಕೇಂದ್ರ, ಜೆ.ಜಿ ಹಳ್ಳಿ ಹೋಬಳಿಯಲ್ಲಿ ಜೆಜಿ ಹಳ್ಳಿ ರೈತ ಸಂಪರ್ಕ ಕೇಂದ್ರ, ಮತ್ತು ಕಸಬಾ ಹೋಬಳಿಯಲ್ಲಿ ಕಸಬಾ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಲಾಟರಿ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.