ADVERTISEMENT

ರಾಷ್ಟ್ರೀಯ ಪಕ್ಷಗಳ ಮಗ್ಗಲು ಮುರಿಯಿರಿ

ಚಳ್ಳಕೆರೆ: ಬಿಎಸ್‌ಆರ್ `ಸಂಕಲ್ಪ ಯಾತ್ರೆ'ಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 9:48 IST
Last Updated 21 ಡಿಸೆಂಬರ್ 2012, 9:48 IST

ಚಳ್ಳಕೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳಿಂದ ಬರಪೀಡಿತ ತಾಲ್ಲೂಕಿನ ಜನತೆ ನಲುಗಿ ಹೋಗಿದ್ದಾರೆ. ಆದ್ದರಿಂದ, ಉತ್ತಮ ಆಡಳಿತಕ್ಕಾಗಿ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡುವ ಮೂಲಕ ರಾಷ್ಟ್ರೀಯ ಪಕ್ಷಗಳ ಮಗ್ಗಲು ಮುರಿಯಬೇಕು ಎಂದು ಬಿಎಸ್‌ಆರ್ ಕಾಂಗ್ರೆಸ್‌ನ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು ಜನತೆಗೆ ಕರೆ ನೀಡಿದರು.

ಪಟ್ಟಣದ ಸಂತೆ ಮೈದಾನದಲ್ಲಿ ಈಚೆಗೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ `ಸಂಕಲ್ಪ ಯಾತ್ರೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಕಾಮನ್‌ವೆಲ್ತ್, 2ಜಿ, ಕಲ್ಲಿದ್ದಲು ಹಾಗೂ ಎಫ್‌ಡಿಐ ಜಾರಿಗೆ ತರಲು ರೂ 125 ಕೋಟಿ ಲಂಚ ಸ್ವೀಕರಿಸುವ ಮೂಲಕ ಹಗರಣಗಳ ಸುಳಿಯಲ್ಲಿ ಸಿಲುಕಿದೆ. ದೆಹಲಿಯಲ್ಲಿ ಕುಳಿತು ಕರ್ನಾಟಕದ ಆರು ಕೋಟಿ ಜನರನ್ನು ಆಳುವ ನಾಯಕರಿಗೆ ತಕ್ಕಪಾಠ ಕಲಿಸಲು ಜನರು ಮುಂದೆ ಬರಬೇಕು ಎಂದರು.

ಕರ್ನಾಟಕದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಆಂಧ್ರಪ್ರದೇಶದಲ್ಲಿ ವೈಎಸ್‌ಆರ್ ಕಾಂಗ್ರೆಸ್‌ನ ಜಗನ್ಮೋಹನ್ ರೆಡ್ಡಿ ಅವರನ್ನು ಜೈಲಲ್ಲಿ ಇಡುವ ಮೂಲಕ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

ಸಂಸತ್ ಸದಸ್ಯೆ ಜೆ. ಶಾಂತಾ ಮಾತನಾಡಿ, ರಾಜ್ಯದಲ್ಲಿ ಹಿಂದುಳಿದ ವರ್ಗದವರನ್ನು ಒಂದುಗೂಡಿಸಲು ಶ್ರೀರಾಮುಲು ನೇತೃತ್ವದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಉದಯಿಸಿರುವ ಬಿಎಸ್‌ಆರ್ ಕಾಂಗ್ರೆಸ್ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡಬೇಕು ಎಂದು ಕೋರಿದರು.

ಕೊಪ್ಪಳ ಮಾಜಿ ಸಂಸತ್ ಸದಸ್ಯ ವಿರೂಪಾಕ್ಷಪ್ಪ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಕುರ್ಚಿಗಾಗಿ ಕಿತ್ತಾಟ ನಡೆಸುವುದರ ಮೂಲಕ ಜನತೆ ಮುಂದೆ ಬೆತ್ತಲಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಮುಖಂಡ ಎಲ್. ನಾಗರಾಜು ಮಾತನಾಡಿ, ಸ್ವಾತಂತ್ರ್ಯ ಬಂದು 66 ವರ್ಷಗಳೇ ಕಳೆದರೂ ಚಳ್ಳಕೆರೆ ಪಟ್ಟಣ ಕೊಳಚೆ ಪಟ್ಟಣದಂತೆ ಗೋಚರಿಸುತ್ತಿದೆ. ಚುನಾಯಿತ ಸದಸ್ಯರ ಬೇಜವಾಬ್ದಾರಿತನದಿಂದ ಪಟ್ಟಣ ಪ್ರಗತಿ ಕಂಡಿಲ್ಲ.

ಪುರಸಭೆಯ 27 ವಾರ್ಡ್‌ಗಳನ್ನು ಬಿಎಸ್‌ಆರ್ ಕಾಂಗ್ರೆಸ್‌ನ ಸಂಸ್ಥಾಪಕ ಅಧ್ಯಕ್ಷ ಬಿ. ಶ್ರೀರಾಮುಲು ಅವರು ದತ್ತು ತೆಗೆದುಕೊಂಡು ಮಾದರಿ ಪುರಸಭೆ ವಾರ್ಡ್‌ಗಳನ್ನಾಗಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಬಳ್ಳಾರಿ ಮಾಜಿ ಸಂಸತ್ ಸದಸ್ಯೆ ಬಸವರಾಜೇಶ್ವರಿ ಪುತ್ರ ಡಾ.ಮಹಿಪಾಲ್ ಮಾತನಾಡಿದರು.ಜಿಲ್ಲಾ ಅಧ್ಯಕ್ಷ ಎಚ್.ಜೆ. ಕೃಷ್ಣಮೂರ್ತಿ, ರವಿಮದಕರಿ, ಕಾಲುವೇಹಳ್ಳಿ ಶ್ರೀನಿವಾಸ್, ಯತ್ನಟ್ಟಿ ಗೌಡ, ಶ್ರೀರಾಮುಲು ಸೇನೆ ಅಧ್ಯಕ್ಷ ಶ್ರೀನಿವಾಸ್, ತಾಲ್ಲೂಕು ಸಂಚಾಲಕ ಜಿ.ಟಿ. ನಾಗರಾಜ್, ದುರ್ಗಾವರ ರಂಗಸ್ವಾಮಿ, ರುದ್ರಮೂರ್ತಿ, ಕರಿಯಪ್ಪ, ಪ್ರಶಾಂತ್, ಚನ್ನಂಗಿ ಸುರೇಶ್, ಮೀರಾಸಾಬಿಹಳ್ಳಿ ಓಂಕಾರಪ್ಪ, ಮಲ್ಲಿಕಾರ್ಜುನ, ಗೌರಮ್ಮ ಮತ್ತಿತರರು ಇದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT