ADVERTISEMENT

ರೈತರ ನೆರವಿಗೆ ಒತ್ತಾಯಿಸಿ ದೆಹಲಿಗೆ ಹೋಗಲು ಸಿದ್ಧ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 6:19 IST
Last Updated 24 ಅಕ್ಟೋಬರ್ 2017, 6:19 IST
ಭರಮಸಾಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೋಮವಾರ ಜೆಡಿಎಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿದರು.
ಭರಮಸಾಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೋಮವಾರ ಜೆಡಿಎಸ್ ಪಕ್ಷದ ನೂತನ ಕಚೇರಿಯನ್ನು ಉದ್ಘಾಟಿಸಿದರು.   

ಭರಮಸಾಗರ: ರಾಜ್ಯದಲ್ಲಿ ತತ್ತರಿಸಿ ಹೋಗಿರುವ ಸಂದರ್ಭದಲ್ಲಿ ಅನಗತ್ಯ ವಿಷಯಗಳ ದೋಷಾರೋಪಣೆಯಲ್ಲಿ ತೊಡಗದೇ ರೈತರ ನೆರವಿಗೆ ಸರ್ಕಾರಗಳು ಸ್ಪಂದಿಸಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಿಳಿಸಿದರು

ಭರಮಸಾಗರದ ಪ್ರವಾಸಿ ಮಂದಿರದ ಬಳಿ  ಜೆಡಿಎಸ್  ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಚಿತ್ರದುರ್ಗ ಸೇರಿದಂತೆ ಎಲ್ಲಾ ಜಿಲ್ಲೆಯಲ್ಲಿ ರೈತರು ಬಿತ್ತಿದ ಮೆಕ್ಕೆಜೋಳ ಲದ್ದಿ ಹುಳುವಿನ ಕಾಟದಿಂದಾಗಿ ಹಾಳಾಗಿದೆ ರೈತರು ಸಂಕಷ್ಟದಲ್ಲಿದ್ದಾರೆ ಈ ಸಂದರ್ಭದಲ್ಲಿ ರೈತರ ನೆರವಿಗೆ ಸರ್ಕಾರಗಳು ಸ್ಪಂದಿಸದೆ ಅವರದೇ ಸಲ್ಲದ ವಿಚಾರಗಳಲ್ಲಿ ಗೊಂದಲವನ್ನುಂಟು ಮಾಡುತ್ತಾ ಕಾಲಹರಣದಲ್ಲಿ ತೊಡಗಿದ್ದಾರೆ ಎಂದರು.

‘ರೈತರಿಗೆ ಸಂಕಷ್ಟ ಒದಗಿದಾಗ ಅವರಿಗೆ ತಕ್ಷಣ ಸ್ಪಂದಿಸಬೇಕು ಈ ಭಾಗದಲ್ಲಿ ಸುಮಾರು ಎರಡು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ ಮೆಕ್ಕೆಜೋಳಕ್ಕೆ ಹುಳುವಿನ ಬಾಧೆ ತಟ್ಟಿದೆ.

ADVERTISEMENT

ಈ ವಿಚಾರವಾಗಿ ನಾನು ಪ್ರಧಾನಿಗೆ ಈಗಾಗಲೇ ಪತ್ರ ಬರೆದಿದ್ದೇನೆ ತಕ್ಷಣ ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬರಬೇಕು ಈ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದೇನೆ . ಆದರೂ ಈ ಬಗ್ಗೆ ತಾತ್ಸಾರ ಮನೋಭಾವನೆ ತಳೆದಿದ್ದಾರೆ. ನಾನು ನನ್ನ ವಯಸ್ಸನ್ನು ಲೆಕ್ಕಿಸದೇ ಹೋರಾಟದ ಹಾದಿಯನ್ನು ಹಿಡಿಯಲು ಹಿಂಜರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಈ ಬಗ್ಗೆ ಮುಂದಿನ ದಿನಗಳಲ್ಲಿ ರೈತ ಸಮುದಾಯವನ್ನು ದೆಹಲಿಗೆ ಕರೆದೊಯ್ದು ಹೋರಾಟ ಮಾಡಬೇಕು. ರೈತರನ್ನು ಮರೆತರೆ ಅವರಿಂದ ಸರಿಯಾದ ಪಾಠ ಕಲಿಯಬೇಕಾಗುತ್ತದೆ’ ಎಂದರು. ಭರಮಸಾಗರ ಸಮೀಪದ ಬಸವರಾಜಪ್ಪ ಮತ್ತು ಅಜ್ಜನ ಗೌಡ ಎಂಬ ರೈತರ ಜಮೀನಿನಲ್ಲಿ ಮೆಕ್ಕೆಜೋಳ ಲದ್ದಿಹುಳುವಿನ ಬಾಧೆಗೆ ಒಳಗಾಗಿದ್ದನ್ನು ಪರಿಶೀಲನೆ ನಡೆಸಿದರು.

‘ರೈತರ ಬಗ್ಗೆ ಸಿರಿಗೆರೆ ಶ್ರೀಗಳಿಗೆ ಇರುವ ಕಾಳಜಿ ಸರ್ಕಾರಕ್ಕೆ ಇಲ್ಲ. ರೈತರಿಗೆ ನ್ಯಾಯಯುತವಾಗಿ ದೊರೆಯುವ ಸೌಲಭ್ಯಗಳು ದೊರೆಯುತ್ತಿಲ್ಲ. ಪಸಲ್ ಬಿಮಾ ಯೋಜನೆಯಲ್ಲಿ ಸಾಕಷ್ಟು ದೋಷ ಇದೆ. ರಾಜ್ಯದಲ್ಲಿ ತೋಟದ ಬೆಳೆಗಳು, ತೆಂಗು ಅಡಿಕೆ ಹಾಳಾಗಿ ರೈತ ಸಾವಿಗೆ ಶರಣಾಗುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರನ್ನು ನಿರ್ಲಕ್ಷಿಸುತ್ತಿರುದೆ. ನಾನು ಪ್ರಧಾನಿಯಾಗಿದ್ದಾಗ ರೈತ ಸಮುದಾಯದ ಏಳಿಗೆಗೆ ಹೆಚ್ಚಿನ ಒತ್ತು ನೀಡಿದ್ದೆ. ಅವರ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುತ್ತಿತ್ತು ಎಂದರು.

ಜೆಡಿಎಸ್ ಪಕ್ಷದ ಆಕಾಂಕ್ಷಿ ಶ್ರೀನಿವಾಸ ಗದ್ದಿಗಿ, ಕಾಂತರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ, ತಾಲೂಕ್ ಅಧ್ಯಕ್ ಶೇಖರಪ್ಪ, ಕಾರ್ಯದರ್ಶಿ ಮರುಳಸಿದ್ದಪ್ಪ, ನರಸಿಂಹಮೂರ್ತಿ, ಪರಮೇಶಿ, ಸುಜಾತ, ಲೋಕೇಶ್, ಯೋಗೇಶ್ ಜಯ್ಯಣ್ಣ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.