ADVERTISEMENT

ಲೀಗಲ್ ಮೆಟ್ರಾಲಜಿ: ದೇಶಾದ್ಯಂತ ಏಕರೂಪ ಕಾಯ್ದೆಜಾರಿಗೆ

​ಪ್ರಜಾವಾಣಿ ವಾರ್ತೆ
Published 1 ಮೇ 2011, 8:50 IST
Last Updated 1 ಮೇ 2011, 8:50 IST

ಚಿತ್ರದುರ್ಗ: ಕೇಂದ್ರ ಸರ್ಕಾರ ಕಾನೂನು ಮಾಪನಶಾಸ್ತ್ರ ಇಲಾಖೆಗೆ ದೇಶಾದ್ಯಂತ ಏಕ ರೂಪದ ಕಾಯ್ದೆ ‘ಲೀಗಲ್ ಮೆಟ್ರಾಲಜಿ-2009’ ಎನ್ನುವ ಹೊಸ ಕಾಯ್ದೆಯನ್ನು 2011ರ ಏ. 1ರಿಂದ ಜಾರಿಗೊಳಿಸಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಎ.ಎಸ್. ನಿರ್ವಾಣಪ್ಪ ತಿಳಿಸಿದರು.

ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ವಿವಿಧ ವರ್ತಕರ ಸಂಘಗಳ ಆಶ್ರಯದಲ್ಲಿ ಈಚೆಗೆ ‘ಲೀಗಲ್ ಮೆಟ್ರಾಲಜಿ’ ಕಾಯ್ದೆಯ ಹೊಸ ನಿಯಮಾವಳಿಗಳ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ವಸ್ತುಗಳ ಉತ್ಪಾದನೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಅನ್ಯಾಯವಾಗದಿರಲಿ ಎಂದು ಸರ್ಕಾರವು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತಾ ಬಂದಿದೆ. ಕಾನೂನು ಮಾಪನಶಾಸ್ತ್ರ ಇಲಾಖೆಯಲ್ಲಿದ್ದ 1976 ಕಾಯ್ದೆಯನ್ನು ಹಿಂದಕ್ಕೆ ಪಡೆದು 2009ರ ಹೊಸ ಕಾಯ್ದೆಯನ್ನು ಜಾರಿಗೊಳಿಸಿದೆ ಎಂದು ವಿವರಿಸಿದರು.

ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ವಿ.ಎಚ್. ರಾಮಚಂದ್ರ ಮಾತನಾಡಿ,  ಲೀಗಲ್ ಮೆಟ್ರಾಲಜಿ- 2009ರ ಕಾಯ್ದೆಯನ್ನು ಜಾರಿಗೊಳಿಸಿರುವುದರಿಂದ ತೂಕ ಮತ್ತು ಅಳತೆಯಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡುವುದು ಕಾನೂನು ಉಲ್ಲಂಘನೆಯಾಗುತ್ತದೆ. ಗ್ರಾಹಕರಿಗೆ ಮೋಸ ಮಾಡಿದಲ್ಲಿ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಬಹುದಾಗಿದೆ. ಇಲ್ಲಿ ದಂಡ, ಪರಿಹಾರ ಹಾಗೂ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಅನೇಕ ಮಾರಾಟಗಾರರು ಹೆಚ್ಚಿನ ಲಾಭ ಮಾಡಿಕೊಳ್ಳಲು ಗ್ರಾಹಕರಿಗೆ ಮೋಸ ಮಾಡಿ ಅಧಿಕ ದರದಲ್ಲಿ ಮಾರಾಟ ಮಾಡುತ್ತಾರೆ. ಆದರೆ ವರ್ತಕರು ಏಕ ಕಾಲದಲ್ಲಿಯೇ ಹೆಚ್ಚಿನ ಲಾಭ ಪಡೆಯಬೇಕೆಂಬ ದುರಾಸೆ ಬಿಟ್ಟು ನಿಗದಿಪಡಿಸಿರುವ ದರದಲ್ಲಿಯೇ ವಸ್ತುಗಳನ್ನು ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡದೆ ಮಾರಾಟಗಾರರು ಗ್ರಾಹಕರೊಂದಿಗೆ ಉತ್ತಮವಾದ ಸಂಬಂಧವನ್ನು ಬೆಳೆಸಿಕೊಂಡಲ್ಲಿ ಸಾರ್ವಜನಿಕರು ಹಾಗೂ ಈ ನಾಗರಿಕ ಸಮಾಜ ಉತ್ತಮವಾಗಿರುತ್ತದೆ. ನ್ಯಾಯಯುತ ವ್ಯಾಪಾರ ಮಾಡಿದಲ್ಲಿ ನ್ಯಾಯಾಲಯ ಮತ್ತು ಇಲಾಖೆಯಿಂದ ವಿಧಿಸಬಹುದಾದ ದಂಡಗಳಿಂದ ತಪ್ಪಿಸಿಕೊಂಡು ನೆಮ್ಮದಿಯ ಜೀವನವನ್ನು ನಡೆಸಬಹುದಾಗಿದೆ ಎಂದರು.

 ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಎಂ.ಎಸ್. ಕುಮಾರ್ ಮಾತನಾಡಿ, ಪೊಟ್ಟಣ ಸಾಮಗ್ರಿ ನಿಯಮಾವಳಿ 1983ರಿಂದ ಜಾರಿಯಲ್ಲಿದ್ದ ಕಾಯ್ದೆಗೆ ತಿದ್ದುಪಡಿ ಮಾಡಿ ಪೊಟ್ಟಣ ಸಾಮಗ್ರಿ ನಿಯಮಾವಳಿ 2011 ಅನ್ನು ಜಾರಿಗೆ ತರಲಾಗಿದೆ. ಯಾವುದೇ ವಸ್ತುಗಳನ್ನು ತಯಾರಿಸಿ ಪೊಟ್ಟಣದಲ್ಲಿ ಪ್ಯಾಕಿಂಗ್ ಮಾಡಿದಾಗ ಅದರ ಮೇಲೆ ತಯಾರಕರ ವಿಳಾಸ ಮತ್ತು ಆಮದಾಗಿದ್ದರೆ ಆಮದುದಾರರ ವಿಳಾಸ ಹಾಗೂ ಅಳತೆಯ ವಿವರ ಮತ್ತು ಅದಕ್ಕೆ ನಿಗದಿಪಡಿಸಿದ ದರವನ್ನು ನಮೂದು ಮಾಡುವುದು ಕಡ್ಡಾಯವಾಗಿದೆ.

ಯಾವುದೇ ವಸ್ತುವನ್ನು ಪೇಪರ್‌ನಲ್ಲಿ ಪ್ಯಾಕ್ ಮಾಡಿದ್ದರೂ ಕಾಯ್ದೆ ವ್ಯಾಪ್ತಿಗೆ ಒಳಪಡಲಿದ್ದು ಕಡ್ಡಾಯವಾಗಿ ಪೊಟ್ಟಣ ಸಾಮಗ್ರಿ ನಿಯಮಾವಳಿಗಳನ್ನು ಪಾಲಿಸಿರಬೇಕು. ವಸ್ತುಗಳ ದರ ಹಾಗೂ ವಿಳಾಸವನ್ನು ನಮೂದು ಮಾಡುವುದು ಕಡ್ಡಾಯವಾಗಿದ್ದು ಇದು ಬಟ್ಟೆಗಳು ಹಾಗೂ ಸೀರೆಗಳು ಸೇರಿದಂತೆ ಎಲ್ಲ ವಸ್ತುಗಳಿಗೂ ಅನ್ವಯವಾಗಲಿದೆ. ಇದನ್ನು ಉಲ್ಲಂಘಿಸಿದರೆ ಮಾರಾಟಗಾರರ ಮೇಲೆ ಸ್ಥಳದಲ್ಲೇ ರೂ 2 ಸಾವಿರ ದಂಡ ವಿಧಿಸಲಾಗುತ್ತದೆ. ಈ ಹಿಂದಿನ ಕಾಯ್ದೆಯಲ್ಲಿ ಕಾಯ್ದೆಯ ಉಲಂ್ಲಘನೆಯಾದಾಗ ಸ್ಥಳದಲ್ಲೇ ವಿಧಿಸಲಾಗುತ್ತಿದ್ದ ದಂಡದ ಮೊತ್ತ ಹಾಕಲು ಅಧಿಕಾರಿಗಳಿಗೆ ವಿವೇಚನಾ ಅಧಿಕಾರವಿತ್ತು. ಆದರೆ, ಹೊಸ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದರು.

ತುಮಕೂರು ಜಿಲೆಯ್ಲ ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಸಿ.ಗೋವಿಂದಪ್ಪ ಮಾತನಾಡಿ, 1976ರಲ್ಲಿ ತೂಕ ಮತ್ತು ಅಳತೆಗಳ ಕಾಯ್ದೆಯನ್ನು ಜಾರಿಗೊಂಡಿದ್ದು, ಇಲ್ಲಿಯವರೆಗೆ ಯಾವುದೇ ತಿದ್ದುಪಡಿ ಮಾಡಿರಲಿಲ್ಲ. ಈ ಕಾಯ್ದೆಯಲ್ಲಿ 168 ಉಪ ನಿಯಮಗಳಿದ್ದವು.

2009 ಕಾಯ್ದೆಯಲ್ಲಿ 57 ಉಪ ನಿಯಮಗಳಿದ್ದು ಸರಳೀಕರಣಗೊಳಿಸಿ ವರ್ತಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅನುಕೂಲವಾದ ಬದಲಾವಣೆ ಮಾಡಲಾಗಿದೆ. ಹಿಂದೆ ಎಲ್ಲ ತೂಕದ ಸಾಧನಗಳನ್ನು ವರ್ಷದಲ್ಲಿ ಒಂದು ಸಾರಿ ಮುದ್ರೆ ಮಾಡಿಸಬೇಕೆಂಬ ನಿಯಮವಿತ್ತು. ಆದರೆ ಹೊಸ ಕಾಯ್ದೆ ಅನ್ವಯ ತೂಕದ ಸಾಧನಗಳನ್ನು ಎರಡು ವರ್ಷಗಳಿಗೊಮ್ಮೆ ಮತ್ತು ಎಲೆಕ್ಟ್ರಾನಿಕ್ಸ್ ಯಂತ್ರಗಳನ್ನು ಒಂದು ವರ್ಷಕ್ಕೊಮ್ಮೆ ತಪಾಸಣೆಗೊಳಪಡಿಸಿ ಮುದ್ರೆ ಹಾಕಿಸಬೇಕು. ಶೇಖರಣಾ ಟ್ಯಾಂಕ್‌ಗಳಾಗಿದ್ದಲ್ಲಿ 5 ವರ್ಷಗಳಿಗೊಮ್ಮೆ ಮಾಡಿಸಬೇಕು ಎಂದು ವಿವರಿಸಿದರು.

ಇಲಾಖೆಯ ಅಧಿಕಾರಿಗಳು ಕಿರುಕುಳ  ನೀಡುತ್ತಿದ್ದಾರೆ ಮತ್ತು ವರ್ತಕರು ಕಾಯ್ದೆ ಉಲ್ಲಂಘಿಸಿದಾಗ ಅಧಿಕ ದಂಡ ವಿಧಿಸಿದ್ದಲ್ಲಿ ಮೇಲಾಧಿಕಾರಿಗೆ ಮನವಿ ಸಲ್ಲಿಸಲು ಅವಕಾಶವಿದೆ. ಹಿಂದಿನ ಕಾಯ್ದೆಯಲ್ಲಿ ಅಧಿಕಾರಿಗಳಿಗೆ ದಂಡದ ಮೊತ್ತ ನಿಗದಿಪಡಿಸಲು ವಿವೇಚನಾಧಿಕಾರವಿತ್ತು. ಆದರೆ, ಈ ಅಧಿಕಾರ ತೆಗೆದು ಹಾಕಲಾಗಿದೆ. ನಿಯಮಾವಳಿಯಲ್ಲಿ ನಿಗದಿಪಡಿಸಿದ ದಂಡಗಳನ್ನು ಪಾವತಿಸಬೇಕು. ಸ್ಥಳದಲ್ಲಿ ದಂಡ ಪಾವತಿಸದೆ ನಿರಾಕರಿಸಿದರೆ ನ್ಯಾಯಾಲಯದಲ್ಲಿ ಇದಕ್ಕೆ 10ರಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ.

ಕಾನೂನು ಮಾಪನಶಾಸ್ತ್ರ ಇಲಾಖೆ ವ್ಯಾಪ್ತಿಗೆ ಎಲ್ಲ ಅಂಗಡಿಗಳು, ಪೆಟ್ರೋಲ್ ಬಂಕ್, ಸೀಮೆಎಣ್ಣೆ ಮಾರಾಟಗಾರರು, ಬಟ್ಟೆ ಅಂಗಡಿಗಳು, ಪೊಟ್ಟಣ ತಯಾರಿಕಾ ಉದ್ದಿಮೆಗಳು ಒಳಪಡುತ್ತದೆ ಎಂದರು.
ಕಾನೂನು ಮಾಪನಶಾಸ್ತ್ರ ಇಲಾಖೆ ಉಪ ನಿಯಂತ್ರಕರಾದ ಟಿ.ಸಿ. ಬೀರೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಕಾರ್ಯದರ್ಶಿ ಸದಾಶಿವಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಟೇಸ್ವಾಮಿ, ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ನಾಗಭೂಷಣ, ಜವಳಿ ವರ್ತಕರ ಸಂಘದ ಅಧ್ಯಕ್ಷ ವಸ್ತಿಮಲ್ ಹಾಜರಿದ್ದರು. ಕಾನೂನು ಮಾಪನಶಾಸ್ತ್ರ ಇಲಾಖೆ ನಿರೀಕ್ಷಕ ಹೇಮಣ್ಣ ಬಿ. ಮಲ್ಲೂರ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.