ADVERTISEMENT

ಶಾಸಕರ ಅವಹೇಳನೆ: ಖಂಡನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 6:00 IST
Last Updated 19 ಫೆಬ್ರುವರಿ 2011, 6:00 IST

ಭರಮಸಾಗರ: ಬಿಳಿಚೋಡು ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ ಖಂಡಿಸಿ ಗ್ರಾಮದಲ್ಲಿ ಈಚೆಗೆ ನಡೆದ ಪ್ರತಿಭಟನೆಯಲ್ಲಿ ಶಾಸಕ ಎಂ. ಚಂದ್ರಪ್ಪ ವಿರುದ್ಧ ಪ್ರತಿಭಟನಾಕಾರರು ಅವಹೇಳನಕಾರಿ ಶಬ್ದ ಬಳಸಿರುವುದನ್ನು ಸ್ಥಳೀಯ ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಮುಖಂಡರು, ಪ್ರತಿಭಟನೆ ರಾಜಕೀಯ ದುರುದ್ದೇಶದಿಂದ ಕೂಡಿದೆ. ಶಾಸಕರ ಅನುದಾನದಲ್ಲಿ ಭರಮಸಾಗರದಿಂದ ಮುಚ್ಚನೂರು ವರೆಗೆ ರಸ್ತೆ ಅಭಿವೃದ್ಧಿಗಾಗಿ 3.4ಕೋಟಿ  ಮಂಜೂರಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಿಂದ ಬಿದರಕೆರೆ ರಸ್ತೆವರೆಗೆ ಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳು ಇರುವುದು ರಸ್ತೆ ವಿಸ್ತರಣೆಗೆ ಅಡ್ಡಿಯಾಗಿತ್ತು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಿದ ಉದಾಹರಣೆ ಇಲ್ಲ. ಶಾಸಕ ಚಂದ್ರಪ್ಪ ನಷ್ಟಕ್ಕೆ ಒಳಗಾದವರಿಗೆ ಪರಿಹಾರವಾಗಿ ನಿವೇಶನ ನೀಡುವ ಭರವಸೆ ನೀಡಿ ಅಂಗಡಿ ಮಾಲೀಕರನ್ನು ಒಪ್ಪಿಸಿ ಕಾಮಗಾರಿ ಆರಂಭವಾಗುವಂತೆ ಮಾಡಿದ್ದರು. ಆದರೆ, ಅಂಗಡಿಗಳನ್ನು ಬಾಡಿಗೆ ಪಡೆದವರಿಂದ ತೆರವು ಕಾರ್ಯಕ್ಕೆ ಅಡ್ಡಿಯಾಗಿದೆ. ರಸ್ತೆ ಪಕ್ಕದಲ್ಲಿರುವ ಕೆಲವು ತೋಟದ ಮಾಲೀಕರು ರಸ್ತೆ ಕೆಳಗೆ ಹಾಕಿದ್ದ ಪೈಪುಗಳನ್ನು ಒಡೆದು ರಸ್ತೆ ಮಧ್ಯೆ ನೀರು ನಿಲ್ಲುವಂತೆ ಮಾಡಿ ಕಾಮಗಾರಿಗೆ ಅಡ್ಡಿ ಮಾಡುತ್ತಿದ್ದಾರೆ. ಜತೆಗೆ, ನಷ್ಟಕ್ಕೊಳಗಾದವರಿಗೆ ನಿವೇಶನ ನೀಡಲು ಅಡ್ಡಿಪಡಿಸಿರುತ್ತಿರುವ ಜಿ.ಪಂ. ಮಾಜಿ ಸದಸ್ಯರೇ ಕಾಮಗಾರಿ ವಿಳಂಬವಾಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಜನಪ್ರತಿನಿಧಿಗಳು ಪಕ್ಷಭೇದ ಮರೆತು ಜನಪರ ಕೆಲಸಗಳಿಗೆ ಸ್ಪಂದಿಸಬೇಕು. ಇಲ್ಲವಾದರೆ ಇಂತಹವರ ವಿರುದ್ಧ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಿ.ಪಂ. ಸದಸ್ಯೆ ಲಕ್ಷ್ಮೀಮೌನೇಶ್, ತಾ.ಪಂ. ಉಪಾಧ್ಯಕ್ಷೆ ನಿರ್ಮಲಾ ಮಲ್ಲೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎನ್.ಎಚ್. ಮಂಜುನಾಥ್, ಗ್ರಾ.ಪಂ. ಸದಸ್ಯ ಕಲ್ಲೇಶ್, ಡಿ.ಎಸ್. ಪ್ರವೀಣ್‌ಕುಮಾರ್, ಡಿ.ಎಸ್. ಪ್ರದೀಪ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.