ADVERTISEMENT

ಶಿಕ್ಷಕರ ಅಸಭ್ಯ ವರ್ತನೆ; ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 6:28 IST
Last Updated 13 ಜುಲೈ 2013, 6:28 IST

ಚಿತ್ರದುರ್ಗ: ಶಾಲೆಯಲ್ಲಿ ಶಿಕ್ಷಕರ ಗುಂಪುಗಾರಿಕೆ ಮತ್ತು ಅಸಭ್ಯ ವರ್ತನೆಗೆ ಬೇಸತ್ತ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟಿಸಿದ ಘಟನೆ ಶುಕ್ರವಾರ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಸರ್ಕಾರಿ ಹಿರಿಯ ಶಾಲೆಯ ಮುಖ್ಯ ಶಿಕ್ಷಕ ನೂರುಲ್ಲಾಖಾನ್, ಸಹ ಶಿಕ್ಷಕ ಶಂಕರಾ ಚಾರ್ಯ ಹಾಗೂ ಸಹ ಶಿಕ್ಷಕಿ ಶೈಲಜಾ ಅವರ ನಡುವಿನ ಹೊಂದಾಣಿಕೆಯ ಕೊರತೆಯಿಂದಾಗಿ ಉಂಟಾಗುತ್ತಿದ್ದ ಜಗಳದಿಂದ ಗ್ರಾಮಸ್ಥರು ಬೇಸತ್ತ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

`ಶಿಕ್ಷಕರ ಜಗಳ ಬಿಡಿಸಲು ನಾವು ಅನೇಕ ಬಾರಿ ಬುದ್ದಿವಾದ ಹೇಳಿದ್ದೆವು. ಆದರೆ ಅವರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳಲಿಲ್ಲ. ಇಂಥ ಶಿಕ್ಷಕರನ್ನು ಶಾಲೆಯಿಂದಲೇ ವರ್ಗಾಯಿಸಬೇಕು' ಎಂದು ನೊಂದ ವಿದ್ಯಾರ್ಥಿಗಳ ಪೋಷಕರು ಮತ್ತು ಗ್ರಾಮಸ್ಥರು ಕಿಡಿ ಕಾರಿದರು.

`ಶಿಕ್ಷಕರ ಜಗಳದ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕಿ ಶೈಲಜಾ ಅವರೊಂದಿಗೆ ಸಹ ಶಿಕ್ಷಕ ಶಂಕರಾಚಾರ್ಯ ಅವರು ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ವಿಚಾರವನ್ನು ಶೈಲಜಾ ಅವರು ಚಿತ್ರದುರ್ಗದಲ್ಲಿ ಪೊಲೀಸ್ ಇಲಾಖೆಯಲ್ಲಿರುವ ತಮ್ಮ ಪತಿಗೆ ತಿಳಿಸಿದ್ದರು. ಅವರು ಸಂಘಟನೆಯೊಂದರ ಕಾರ್ಯಕರ್ತರಿಗೆ ವಿಷಯ ಮುಟ್ಟಿಸಿ, ಶಂಕರಾಚಾರ್ಯ ಅವರ ಮೇಲೆ ಹಲ್ಲೆ ಮಾಡಿಸಿದ್ದರು' ಎಂದು ಗ್ರಾಮಸ್ಥರು ದೂರಿದರು. ಈ ಘಟನೆಗಳಿಂದ ಗ್ರಾಮದ ಗೌರವಕ್ಕೆ ಕುಂದು ಬರುತ್ತದೆ ಎಂದು ತೀರ್ಮಾನಿಸಿ ಶಾಲೆಗೆ ಬೀಗ ಹಾಕಿದ್ದೇವೆ' ಎಂದು ಗ್ರಾಮಸ್ಥರು ವಿವರಿಸಿದರು.

ಶಾಲೆಗೆ ಬೀಗ ಹಾಕಿರುವ ವಿಚಾರ ತಿಳಿದ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಟಿ.ಬಾಬುರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿ ಶಾಲೆಯ ಬೀಗ ತೆರವುಗೊಳಿಸಿದರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಗ್ರಾಮಸ್ಥರ ಕೋರಿಕೆ ಮೇರೆಗೆ ಈ ಮೂವರು ಶಿಕ್ಷಕರನ್ನು ವರ್ಗಾವಣೆ ಮಾಡಲು ಶಿಫಾರಸು ಮಾಡುವುದಾಗಿ ತಿಳಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.