ADVERTISEMENT

ಸಮುದಾಯ ಭವನಕ್ಕೆ ರೂ 5 ಲಕ್ಷ: ಜನಾರ್ದನ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 10:09 IST
Last Updated 14 ಜೂನ್ 2013, 10:09 IST

ಚಿತ್ರದುರ್ಗ:  ಮಾನಂಗಿಯಲ್ಲಿ ನಿರ್ಮಿಸುವ ಸಮುದಾಯ ಭವನ ನಿರ್ಮಾಣಕ್ಕಾಗಿ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ 5 ಲಕ್ಷ ಹಣವನ್ನು ಮಂಜೂರು ಮಾಡಲಾಗಿದೆ ಎಂದು ಸಂಸತ್ ಸದಸ್ಯ ಜನಾರ್ದನಸ್ವಾಮಿ ತಿಳಿಸಿದರು.

ತಾಲ್ಲೂಕಿನ ಮಾನಂಗಿ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಗುರುವಾರ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಬಯಲು ಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ಸುಮಾರುರೂ 700 ಕೋಟಿಯಷ್ಟು ಅನುದಾನ ನೀಡಲಾಗಿತ್ತು. ಅದರಲ್ಲಿರೂ 600 ಕೋಟಿ ವೆಚ್ಚ ಮಾಡಲಾಗಿದೆ. ಈ ಹಣದಲ್ಲಿ ಬೃಹತ್ ಗಾತ್ರದ ಯಂತ್ರಗಳನ್ನು ವಿದೇಶಗಳಿಂದ ಖರೀದಿಸಲಾಗಿದೆ ಎಂದು ಅವರು ತಿಳಿಸಿದರು.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಮಾನಂಗಿಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೆಚ್ಚು ಭಕ್ತರಿದ್ದಾರೆ. ಬಡವರು, ಮಧ್ಯಮ ವರ್ಗದವರು ಶುಭ ಸಮಾರಂಭ ನಡೆಸಲು ಅನುಕೂಲವಾಗುವಂತೆ ಸಮುದಾಯ ಭವನ ನಿರ್ಮಿಸಲಾಗುತ್ತಿದೆ ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ದೇವಸ್ಥಾನಕ್ಕೆ ಕಾಂಪೌಂಡ್ ನಿರ್ಮಿಸಲು ಅವಕಾಶ ಇದೆ ಎಂದರು.ದಾವಣಗೆರೆ ಸಂಸತ್ ಸದಸ್ಯ  ಜಿ.ಎಂ.ಸಿದ್ದೇಶ್ವರ ಮಾತನಾಡಿ, 2 ವರ್ಷಗಳ ಹಿಂದೆ ಸಿದ್ದಾಪುರ ಹಾಗೂ ಮಾನಂಗಿ ದೇವಸ್ಥಾನ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ತಲಾರೂ 2 ಲಕ್ಷ ಮಂಜೂರಾಗಿತ್ತು.

ಇದೇ ಸ್ಥಳದಲ್ಲಿ ಆಶ್ರಯ ಮನೆಗಳನ್ನು ನೀಡಲಾಗಿತ್ತು. ಫಲಾನುಭವಿಗಳು ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಹಣ ಪಾವತಿಗೆ ವಿಳಂಬವಾಗಿರುವುದಾಗಿ ತಿಳಿದು ಬಂದಿದೆ. ಚುನಾವಣೆಲ್ಲಿ ಮಾತ್ರ ರಾಜಕೀಯ, ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಇಂದಿರಾ ಕಿರಣ್ ಮಾತನಾಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ನಿಧಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಧನ ಸಹಾಯ ಮಾಡಲಾಗುತ್ತದೆ ಎಂದರು.  ತಾಲ್ಲೂಕು ಪಂಚಾಯ್ತಿ ಸದಸ್ಯೆ ದಾಕ್ಷಾಯಣಮ್ಮ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರ್ವತಮ್ಮ, ಸದಸ್ಯೆ ದೇವಮ್ಮ ಬೋರಪ್ಪ, ದೀಪಾ ತಿಪ್ಪೇಸ್ವಾಮಿ, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಲೋಕೇಶಪ್ಪ ಉಪಸ್ಥಿತರಿದ್ದರು. ಮುಖಂಡರಾದ ಆರ್.ಕೆ.ನಾಯ್ಡು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT