ADVERTISEMENT

ಸರ್ಕಾರಿ ಯೋಜನೆಗಳ ಸದುಪಯೋಗಕ್ಕೆ ಕರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 8:20 IST
Last Updated 6 ಜನವರಿ 2012, 8:20 IST

ಸಿರಿಗೆರೆ: ಸರ್ಕಾರ ಗ್ರಾಮೀಣಾಭಿವೃದ್ಧಿ, ಕೃಷಿ, ಕೃಷಿಯೇತರ ಹಲವಾರು ಯೋಜನೆಗಳಿಗೆ ಕೋಟ್ಯಂತರ ರೂಪಾಯಿಗಳಷ್ಟು ಹಣ ಖರ್ಚು ಮಾಡುತ್ತಿದೆ. ಗ್ರಾಮೀಣ ಜನತೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪ್ರೊ.ಬಿ.ಎಂ. ಮುರಿಗೇಶ್ವರಪ್ಪ ಅಭಿಪ್ರಾಯಪಟ್ಟರು.

ಸಮೀಪದ ಕರಿಯಮ್ಮನ ಹಟ್ಟಿ ಗ್ರಾಮದಲ್ಲಿ ಎಂ. ಬಸವಯ್ಯ ವಸತಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ 1 ಮತ್ತು 2ರ ವತಿಯಿಂದ ಆಯೋಜಿಸಿರುವ ವಾರ್ಷಿಕ ವಿಶೇಷ ಶಿಬಿರ ಉ್ದ್ದದೇಶಿಸಿ ಅವರು ಮಾತನಾಡಿದರು.

ಯಾವುದೇ ಸರ್ಕಾರಿ ಯೋಜನೆಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಅವುಗಳನ್ನು ತಿಳಿದುಕೊಳ್ಳುವ ಸಾಮಾನ್ಯ ಜ್ಞಾನ ನಮ್ಮಲ್ಲಿರಬೇಕು. ಅದೇ ರೀತಿ ಪ್ರತಿಯೊಂದು ಇಲಾಖೆಯಿಂದಲೂ ದೊರೆಯುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದಲ್ಲಿ ಅವುಗಳ ಉಪಯೋಗ ಪಡೆಯಲು ಸಾಧ್ಯ. ಇಂಥ ವಿಚಾರದಲ್ಲಿ ಯಾರೂ ಕೂಡಾ ಇನ್ನೊಬ್ಬರನ್ನು ಆಶ್ರಯಿಸಬಾರದು. ಸ್ವತಃ ಸೌಲಭ್ಯಗಳ ಬಗ್ಗೆ ತಿಳಿಯುವುದರಿಂದ ಹೆಚ್ಚು ಅನುಕೂಲ ಪಡೆಯಬಹುದು ಎಂದು ತಿಳಿಸಿದರು.

ಉಪನ್ಯಾಸಕ ಈ. ದೇವರಾಜು ಮಾತನಾಡಿ, ಎನ್‌ಎಸ್‌ಎಸ್ ಯೋಜನೆಯ ಉದ್ದೇಶ ಗ್ರಾಮಗಳ ಅಭಿವೃದ್ಧಿ, ಸಾಕ್ಷರತೆ, ಜನ ಜಾಗೃತಿ ಮೂಡಿಸುವುದು ಹಾಗೂ ಪರಿಸರ ಸಂರಕ್ಷಣೆಯಂತಹ ಹಲವು ಕಾರ್ಯ ಕ್ರಮಗಳ ಅನುಷ್ಠಾನಗೊಳಿಸುವುದು ಆಗಿದೆ. ಆದ್ದರಿಂದ ಶಿಬಿರಾರ್ಥಿಗಳು ಸ್ನೇಹಭಾವದಿಂದ ಇರಬೇಕು. ಗ್ರಾಮಗಳ ಸ್ವಚ್ಛತೆ ಜತೆಗೆ ಗ್ರಾಮೀಣ ಜನರ ಮನಸ್ಸುಗಳ ಸ್ವಚ್ಛತೆಯ ಕಡೆಗೆ ಗಮನ ಹರಿಸಿದರೆ ಯಾವುದೇ ಲೋಪವಿಲ್ಲದಂತೆ ಕಾರ್ಯ ನಿರ್ವಹಿಸಲು ಪೂರಕವಾಗುತ್ತದೆ. ಗಾಂಧೀಜಿಯವರ ಹಲವು ತತ್ವಾದರ್ಶಗಳನ್ನು ಈ ಹಂತದಿಂದಲೇ ರೂಢಿಸಿಕೊಂಡರೆ ಜೀವನ ನಿರ್ವಹಣೆ ಮತ್ತು ಸೇವೆಯಲ್ಲಿ ಸಮರ್ಪಕ ಯಶಸ್ಸು ಕಾಣಲು ಸಾಧ್ಯ ಎಂದು ತಿಳಿಸಿದರು.

ಆರೋಗ್ಯ ಕವಚ `108~ ಅಂಬುಲೆನ್ಸ್ ಸೇವೆಯ ಕಾರ್ಯ ನಿರ್ವಾಹಕ ಅಧಿಕಾರಿ ರಘುಪ್ರಸಾದ್ ಮಾತನಾಡಿ, ಯಾವುದೇ ತುರ್ತು ಸಂದರ್ಭದಲ್ಲಿ 108ರ ಬಳಕೆ ಬಗ್ಗೆ ಸಾಮಾನ್ಯ ತಿಳಿವಳಿಕೆ ನೀಡಬೇಕು. ಈ ಸೇವೆಯು ರಾಜ್ಯಾದ್ಯಂತ ಉಚಿತ. ಪ್ರಥಮ ಚಿಕಿತ್ಸೆಯನ್ನೂ ಸಹ ಉಚಿತವಾಗಿ ಇದೇ ವಾಹನದಲ್ಲಿ ಮಾಡಲಾಗುತ್ತಿದೆ.

ಯಾರೊಬ್ಬರೂ ಕೂಡಾ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಕರೆ ನೀಡಿದರು. ನಂತರ ವಾಹನದಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಕೆ ಮನವರಿಕೆ ಮಾಡಿಕೊಟ್ಟರು.
ಜಿಲ್ಲಾ ಅಗ್ನಿಶಾಮಕ ಠಾಣೆಯ ಬಸವಪ್ರಭು ಶರ್ಮ ಮತ್ತು ಸಿಬ್ಬಂದಿ, ಅಗ್ನಿ ಆಕಸ್ಮಿಕ ಹಾಗೂ ಅವುಗಳ ನಿಯಂತ್ರಣ ಕುರಿತಂತೆ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಜಿ.ಆರ್. ನಂಜುಂಡಪ್ಪ, ಸಿ.ಜಿ. ಶಶಿಕುಮಾರ್, ರಾಜೇಂದ್ರ, ನಾಗರಾಜ್, ಶಿಬಿರಾಧಿಕಾರಿ ಜಿ.ಎ. ರವೀಂದ್ರನಾಥ್, ಎಸ್. ರವಿ. ಮೈಲಾರಪ್ಪ, ಪ್ರಶಾಂತ್, ಬಸವರಾಜ್, ಮುಂತಾದವರು ಉಪಸ್ಥಿತರಿದ್ದರು.

ಶಿಬಿರಾರ್ಥಿ ಬಿ.ವಿ. ದೇವಿಕಾರಾಣಿ ಪ್ರಾರ್ಥಿಸಿದರು. ಸಿ.ಎಂ. ಸಂಹಿತಾ ಯಾದವ್ ಸ್ವಾಗತಿಸಿದರು. ಎನ್. ಸವಿತಾ ವಂದಿಸಿದರು. ಎ. ರೇಖಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.