ADVERTISEMENT

ಸಾಹಿತ್ಯದಿಂದ ಉತ್ತಮ ಸಮಾಜ ನಿರ್ಮಾಣ

ಕೊಂಡ್ಲಹಳ್ಳಿ: ಜಿಲ್ಲಾ ಮಟ್ಟದ ಚುಟುಕು ಕವಿಗೋಷ್ಠಿಯಲ್ಲಿ ಎಂ.ಜಿ.ಆರ್.ಅರಸ್ ಅಭಿಮತ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 9:37 IST
Last Updated 17 ಜೂನ್ 2013, 9:37 IST
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಚುಟುಕು ಕವಿಗೋಷ್ಠಿಯನ್ನು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ರಾಜ್ಯ ಸಂಚಾಲಕ ಎಂ.ಜಿ.ಆರ್.ಅರಸ್ ಉದ್ಘಾಟಿಸಿದರು.
ಮೊಳಕಾಲ್ಮುರು ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಚುಟುಕು ಕವಿಗೋಷ್ಠಿಯನ್ನು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ರಾಜ್ಯ ಸಂಚಾಲಕ ಎಂ.ಜಿ.ಆರ್.ಅರಸ್ ಉದ್ಘಾಟಿಸಿದರು.   

ಮೊಳಕಾಲ್ಮುರು: ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯ ಸಾಹಿತ್ಯದಿಂದ ಮಾತ್ರ ಪರಿಣಾಮಕಾರಿಯಾಗಿ ಸಾಧ್ಯ ಎಂದು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ರಾಜ್ಯ ಸಂಚಾಲಕ ಎಂ.ಜಿ.ಆರ್.ಅರಸ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಚುಟುಕು ಕವಿಗೋಷ್ಠಿ ಮತ್ತು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರೀತಿ, ವಿಶ್ವಾಸ, ಶಾಂತಿ ಕ್ಷೀಣಿಸುವ ಮೂಲಕ ಆತಂಕ ಎದುರಾಗಿದೆ. `ಹೃದಯ ಸ್ಪಂದನ'ದ ಬದಲಾಗಿ 'ಹೃದಯಸ್ತಂಭನ' ಹೆಚ್ಚುತ್ತಿದೆ. ವಚನಗಳು ಸಾಹಿತ್ಯ ಕಾಲದಿಂದಲೂ ಚುಟುಕು ಸಾಹಿತ್ಯ ಸಮಾಜದ ಅಂಕು-ಡೊಂಕು ತಿದ್ದುವ ಕಾರ್ಯವನ್ನು ಮಾಡಿದೆ. ರಾಜ್ಯದ 30 ಜಿಲ್ಲೆಗಳ 82 ತಾಲ್ಲೂಕುಗಳಲ್ಲಿ ಚುಟುಕು ಸಾಹಿತ್ಯ ಪರಿಷತ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ದೊಡ್ಡಮಲ್ಲಯ್ಯ, `ಪ್ರತಿ ವ್ಯಕ್ತಿ ಮತ್ತು ಸಮಾಜ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಹಿತ್ಯ ಸಹಕಾರಿ ಎಂದು ಹೇಳಿದರು.

ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮೈಲಾರಪ್ಪ ಮಾತನಾಡಿ, ಮೊಳಕಾಲ್ಮುರು ತಾಲ್ಲೂಕು ಹಿಂದುಳಿದ ಪ್ರದೇಶವಾದರೂ ಸಾಹಿತ್ಯ, ಕಲೆ ವಿಷಯದಲ್ಲಿ ಶ್ರೀಮಂತವಾಗಿದೆ. ಉದಯೋನ್ಮುಖ ಸಾಹಿತಿಗಳು ಈ ತಾಲ್ಲೂಕಿನಲ್ಲಿ ಹೆಚ್ಚಾಗಿ ಕಂಡುಬರುತ್ತಿರುವುದು ಸಂತಸ. ಇದಕ್ಕೆ ನೀರೆರೆಯುವ ಕಾರ್ಯವನ್ನು ಚುಟುಕು ಸಾಹಿತ್ಯ ಪರಿಷತ್ ಪ್ರಾಮಾಣಿಕವಾಗಿ ಮಾಡಲಿದೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ರೇವಣ್ಣ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಅರಳುತ್ತಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ತಾವು `ತಾರೆ ಪ್ರಕಾಶನ' ಆರಂಭಿಸಿದ್ದು ಪುಸ್ತಕ ಹೊರತರುವ ಕಾರ್ಯಕ್ಕೆ ಸ್ಪಂದಿಸುವುದಾಗಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಶೀಲಮ್ಮ ಷಡಾಕ್ಷರಪ್ಪ ಅಧ್ಯಕ್ಷತೆ ವಹಿಸಿದ್ದರು.

ಮರಿಕುಂಟೆ ತಿಪ್ಪೇಸ್ವಾಮಿ, ಪತ್ರಕರ್ತ ಕೊರ‌್ಲಕುಂಟೆ ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ, ಶಿಕ್ಷಣ ಸಂಯೋಜಕ ಎಸ್.ಬಿ.ರಾಮಚಂದ್ರಯ್ಯ, ಎಸ್‌ಡಿಎಂಸಿ ಅಧ್ಯಕ್ಷ ಕೆ.ಸದಾನಂದ, ಸಾಹಿತಿ ಮೋದೂರು ತೇಜ, ಹೊಳಲ್ಕೆರೆ ಘಟಕ ಅಧ್ಯಕ್ಷ ಡಾ.ಉದಯಕುಮಾರ್, ಕಾ.ತಿ. ಮಾಸ್ತರ್, ಡಿ.ಷಡಾಕ್ಷರಪ್ಪ, ಕೆ.ಜಿ. ಪಾರ್ಥಸಾರಥಿ ಉಪಸ್ಥಿತರಿದ್ದರು.

ಶಿಕ್ಷಕರಾದ ಸಿ.ಚಂದ್ರಶೇಖರ್ ಸ್ವಾಗತಿಸಿದರು. ಕೆ.ಶಾಂತವೀರಣ್ಣ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕ ಕೆ.ಉಮಾಶಂಕರ್ ರಚಿಸಿರುವ `ಮಳೆಬಿಲ್ಲು' ಕವನ ಸಂಕಲನ ಮತ್ತು ಹೊಸದುರ್ಗದ ರುದ್ರಸ್ವಾಮಿ ಅವರ `ಕನಕಾಂಜಲಿ' ಪುಸ್ತಕಗಳನ್ನು ಈ ಸಂದರ್ಭ ಲೋಕಾರ್ಪಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.