ಚಿತ್ರದುರ್ಗ: ತಾಲ್ಲೂಕಿನ ಸಿದ್ಧಾಪುರ ಗ್ರಾಮ ಪಂಚಾಯ್ತಿಗೆ 2012-13ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುಷ್ಠಾನ ಗೊಳ್ಳುತ್ತಿರುವ ಕ್ರಿಯಾ ಯೋಜನೆಗೆ ಜಿಲ್ಲಾ ಪಂಚಾಯ್ತಿ ವತಿಯಿಂದ ರೂ. 55ಲಕ್ಷ ಅನುಮೋದನೆ ದೊರೆತಿದೆ ಎಂದು ಸಿದ್ಧಾಪುರ ಗ್ರಾ.ಪಂ. ಅಧ್ಯಕ್ಷ ಎಸ್. ಭೀಮರಾಜು ತಿಳಿಸಿದರು. ಜಿಲ್ಲೆಯು ತೀವ್ರ ಬರಗಾಲಕ್ಕೆ ತುತ್ತಾಗಿರುವುದರಿಂದ ಈ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಸಿದ್ಧಾಪುರ, ಕಾಟೀಹಳ್ಳಿ, ಹಿದಾಯತ್‌ಪುರ, ಜಾಲಿಕಟ್ಟೆ, ಈರಜ್ಜನಹಟ್ಟಿ, ಕಳ್ಳಿಹಟ್ಟಿ, ಮಾನಂಗಿ ಹಾಗೂ ದೇವರಹಟ್ಟಿ ಗ್ರಾಮಗಳಲ್ಲಿ ಜನರು ವಲಸೆ ಹೋಗುವುದನ್ನು ತಡೆಯಲು ಈ ಯೋಜನೆ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸುಮಾರು 1000 ಜಾಬ್‌ಕಾರ್ಡ್‌ಗಳಿದ್ದು, 100 ದಿನಗಳ ಉದ್ಯೋಗ, ಪ್ರತಿ ಹೆಣ್ಣು ಮತ್ತು ಗಂಡಿಗೆ ಸಮಾನ ವೇತನವಾಗಿ ರೂ. 155 ನೀಡಲಾಗುವುದು. ಜಾಬ್‌ಕಾರ್ಡ್ ಪಡೆದ ಫಲಾನುಭವಿಗಳು ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಕೆಲಸ ನೀಡಲಾಗುವುದು. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ಆಶಾ ನರಸಿಂಹಮೂರ್ತಿ, ಜಿಪಂ ಸದಸ್ಯ ಎಂ. ಗಿರಿ ಜಾನಕಲ್, ತಾ.ಪಂ. ಸದಸ್ಯರಾದ ದಾಕ್ಷಾಯಣಮ್ಮ, ದುರುಗೇಶಪ್ಪ ಹಾಜರಿದ್ದರು ಎಂದು ಪಿಡಿಒ ಎಸ್. ಮೃತ್ಯುಂಜಯಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.