ADVERTISEMENT

ಸ್ಪರ್ಧೆ ಖಚಿತ, ಪಕ್ಷ ಗೊತ್ತಿಲ್ಲ: ತಿಪ್ಪಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:46 IST
Last Updated 15 ಡಿಸೆಂಬರ್ 2012, 6:46 IST

ಚಿತ್ರದುರ್ಗ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆದರೆ, ಯಾವ ಪಕ್ಷ, ಯಾವ ಕ್ಷೇತ್ರ ಎಂದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ತಿಳಿಸಿದರು.

ವಿಶ್ವಕರ್ಮ ಯುವಕರ ಸಮಾಜದ ವತಿಯಿಂದ ಚಿತ್ರದುರ್ಗ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯಾವ ಪಕ್ಷ ಹಾಗೂ ಕ್ಷೇತ್ರ ಎನ್ನುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈಗ ರಾಜ್ಯದಲ್ಲಿ ನೂತನವಾಗಿ ಪಕ್ಷಗಳು ಉದಯವಾಗುತ್ತಿವೆ. ಜನರು ಮತ್ತು ಬೆಂಬಲಿಗರು ಎಲ್ಲಿರಬೇಕೆಂದು ಇನ್ನೂ ನಿರ್ಧಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಬರುವ ಫೆಬ್ರುವರಿ ತಿಂಗಳ ವೇಳೆಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ಆಯಾ ಜಿಲ್ಲೆಗಳ ಶಾಸಕರು ಯಾವ ಪಕ್ಷದಿಂದ ಚುನಾವಣೆ ಸ್ಪರ್ಧಿಸುತ್ತಾರೆ ಎನ್ನುವುದು ಫೆಬ್ರುವರಿ ಹಾಗೂ ಮಾರ್ಚ್ ನಂತರವಷ್ಟೇ ತೀರ್ಮಾನವಾಗಲಿದೆ. ಈ ಬಾರಿ ಚುನಾವಣಾ ಫಲಿತಾಂಶ ಬಂದ ಮೇಲೆ ಯಾರು ಯಾವ ಪಕ್ಷದೊಂದಿಗೆ ಬೇಕಾದರೂ ಕೈಜೋಡಿಸಬಹುದು. ಆದ್ದರಿಂದ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎನ್ನುವುದನ್ನು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ ಎಂದರು.

ರಾಜ್ಯ ಸರ್ಕಾರದಲ್ಲಿ ಎರಡು ಸಚಿವ ಸ್ಥಾನಗಳು ಖಾಲಿ ಉಳಿದಿವೆ. ತಮಗೆ ಸಚಿವ ಸ್ಥಾನ ನೀಡುವಂತೆ ಬಿಜೆಪಿ ಜಿಲ್ಲಾ ಘಟಕದಿಂದ ಹಾಗೂ ಕಾರ್ಯಕರ್ತರಿಂದ ಸರ್ಕಾರ ಹಾಗೂ ರಾಜ್ಯ ಘಟಕಕ್ಕೆ ಒತ್ತಾಯಿಸಲಾಗುತ್ತಿದೆ. ಆದರೆ, ತಮಗೆ ಸಚಿವ ಸ್ಥಾನ ನೀಡುವಂತೆ ಯಾರಿಗೂ ಒತ್ತಡ ತಂದಿಲ್ಲ ಎಂದು  ತಿಪ್ಪಾರೆಡ್ಡಿ ತಿಳಿಸಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ಇತ್ತೀಚೆಗೆ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಅಸಮಾಧಾನವಿದೆ. ಆದ್ದರಿಂದ ಚಿತ್ರದುರ್ಗ ಜಿಲ್ಲೆಗೆ ತೆರವಾಗಿರುವ ಸ್ಥಾನ ತುಂಬಲು ಕಾರ್ಯಕರ್ತರು ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದರು.
ಸದ್ಯಕ್ಕೆ ಚುನಾವಣೆಗೆ ಹೋಗಲು ಯಾವ ಶಾಸಕರಿಗೂ ಇಷ್ಟವಿಲ್ಲ. ಇನ್ನೂ ಐದು ತಿಂಗಳ ಕಾಲಾವಕಾಶವಿದ್ದು, ಮುಂಬರುವ ಬಜೆಟ್‌ನಿಂದ ಘೋಷಣೆಯಾಗುವ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡು ಮುಂದಿನ ಚುನಾವಣೆ ಎದುರಿಸಲಿಕ್ಕೆ ಶಾಸಕರು ಸನ್ನದ್ಧರಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಬಗರ್‌ಹುಕುಂ ಸಾಗುವಳಿದಾರರ ಕುಟುಂಬಗಳಿಗೆ ಅಕ್ರಮ ಸಕ್ರಮ ಪತ್ರ ನೀಡಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆ. ಜತೆಗೆ 23 ಸಾವಿರ ಹಂಗಾಮಿ ನೌಕರರನ್ನು ಖಾಯಂಗೊಳಿಸಲು ಸರ್ಕಾರ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.