ಚಿತ್ರದುರ್ಗ: ಇಡೀ ದೇಶದಲ್ಲಿಯೇ ಪ್ರಥಮ ಬಾರಿಗೆ ನಗರ ಯೋಜನೆಯ ಪರಿಕಲ್ಪನೆ ಜಾರಿಗೊಳಿಸಿದ ಕೀರ್ತಿಗೆ ಕರ್ನಾಟಕ ರಾಜ್ಯ ಪಾತ್ರವಾಗಿದೆ ಎಂದು ನಗರಾಭಿವೃದ್ಧಿ ಸಚಿವ ಎಸ್. ಸುರೇಶ್‌ಕುಮಾರ್ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಚಿತ್ರದುರ್ಗ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರ ಆಯೋಜಿಸಿದ್ದ ರಾಜ್ಯಮಟ್ಟದ ನಗರಾಭಿವೃದ್ಧಿ ಮತ್ತು ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರು, ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿಗಳ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
1903ರಲ್ಲಿ ಪ್ರಥಮ ಬಾರಿಗೆ ಮೈಸೂರು ಸಿಟಿ ಟ್ರಸ್ಟ್ ಬೋರ್ಡ್ ಪ್ರಾರಂಭವಾಗುವ ಮೂಲಕ ದೇಶದಲ್ಲಿಯೇ ಎರಡನೇಯ ರಾಜ್ಯ ಎಂದು ಹೆಸರು ಮಾಡಿದೆ. 1973ರ ಏಕೀಕರಣ ನಂತರದ ಕಾಲಘಟ್ಟದಲ್ಲಿ ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಪ್ರಾಧಿಕಾರ ಎಂದು ಮರು ನಾಮಕರಣ ಮಾಡಲಾಯಿತು ಎಂದರು.
ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ 28 ನಗರಾಭಿವೃದ್ಧಿ, 38 ಯೋಜನಾ ಪ್ರಾಧಿಕಾರಗಳಿಂದ ಶಾಸನ ಬದ್ಧವಾಗಿ 94 ಮಹಾ ಯೋಜನೆಗಳು ಈಗಾಗಲೇ ಪ್ರಗತಿಯಲ್ಲಿವೆ. ಅತ್ಯುತ್ತಮ ಕಾರ್ಯಗಳನ್ನು ಮಾಡುವ ಮೂಲಕ ದುರ್ಬಲ, ಮಧ್ಯಮ ಮತ್ತು ಕೆಳ ಸಮುದಾಯಗಳಿಗೆ ಮನೆ ಮತ್ತು ಮೂಲ ಸೌಲಭ್ಯ ಒದಗಿಸಲು ಎಲ್ಲಾ ಪ್ರಾಧಿಕಾರಗಳು ಉತ್ಸಾಹ ತೋರುತ್ತಿವೆ ಎಂದು ತಿಳಿಸಿದರು.
ಖಾಸಗಿ ವ್ಯಕ್ತಿಗಳು ಜಮೀನುಗಳನ್ನು ಕೊಂಡು ಬಡಾವಣೆಗಳನ್ನು ನಿರ್ಮಿಸುತ್ತಿರುವುದು ಹಣ ಮಾಡುವ ಉದ್ದೇಶದಿಂದ. ಇಲ್ಲಿ ದುರ್ಬಲ ಜನರ ಬಗ್ಗೆ ಅನುಕಂಪ ಇಲ್ಲ. ಪ್ರಾಧಿಕಾರಗಳು ಬಡಾವಣೆ ನಿರ್ಮಿಸಲು ಮುಂದೆ ಬಾರದಿದ್ದರೆ ಖಾಸಗಿಯವರು ಜಮೀನು ಕೊಳ್ಳುವುದು ಮತ್ತು ಬಡಾವಣೆ ನಿರ್ಮಿಸುತ್ತಾರೆ. ಆದ್ದರಿಂದ, ಜಿಲ್ಲಾಮಟ್ಟದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳು ಹೆಚ್ಚು ಸಂಪನ್ಮೂಲ ಕ್ರೋಡಿಕರಿಸಿ ಬಡಾವಣೆ ನಿರ್ಮಿಸಬೇಕಿದೆ ಎಂದು ಸಲಹೆ ನೀಡಿದರು.
ಈಗಾಗಲೇ ಬಡಾವಣೆ ಪ್ರಾರಂಭಿಸಿ ಅಪೂರ್ಣವಾಗಿರುವ ಯೋಜನೆ ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು. ಯಾವುದೇ ಯೋಜನೆ ಪ್ರಾರಂಭಿಸುವ ಮುಂಚೆ ಸ್ಪಷ್ಟವಾದ ಪರಿಕಲ್ಪನೆ ಇಟ್ಟುಕೊಂಡು ಕೆಲಸ ನಿರ್ವಹಿಸಬೇಕು. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚಿತ್ರದುರ್ಗದಲ್ಲಿ ರಾಜ್ಯದ ಎ್ಲ್ಲಲ ಪ್ರಾಧಿಕಾರಗಳ ಅಧ್ಯಕ್ಷರು, ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿರುವುದು ವಿಶೇಷ. ಚಿತ್ರದುರ್ಗದಲ್ಲಿ ಕಳೆದ ಎರಡು, ಮೂರು ತಿಂಗಳ ಹಿಂದೆಯೇ ನಡೆಸಲು ತೀರ್ಮಾನಿಸಲಾಗಿತ್ತು ಎಂದರು.
ಸಮಾರಂಭದಲ್ಲಿ ಶಾಸಕ ಎಸ್.ಕೆ. ಬಸವರಾಜನ್, ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಪಿ. ಗುರುರಾಜ್, ಕಾರ್ಯದರ್ಶಿ ಶ್ರೀನಿವಾಸಾಚಾರಿ, ಜಿ.ಪಂ. ಸಿಇಒ ನಾರಾಯಣಸ್ವಾಮಿ, ಪ್ರಾಧಿಕಾರದ ಸದಸ್ಯರಾದ ತಿಪ್ಪೇಸ್ವಾಮಿ, ಗೌರಣ್ಣ, ಮಂಜುಳಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.