ADVERTISEMENT

ಹತ್ತಿಗೆ ಕೀಟ ಭಾದೆ: ಆತಂಕ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 12:50 IST
Last Updated 1 ಜೂನ್ 2018, 12:50 IST

ಚಿಕ್ಕಜಾಜೂರು: ಮಳೆಯಿಂದ ಬಿತ್ತನೆಗೆ ಮುಂದಾಗಿದ್ದ ರೈತರು, ಇದೀಗ ಹತ್ತಿಗೆ ಕೀಟ ಬಾಧೆಯಿಂದ ಆತಂಕ ಎದುರಿಸುವಂತಾಗಿದೆ.

ಮೇ ತಿಂಗಳ ಮೊದಲ ವಾರದಿಂದ ಬಿ. ದುರ್ಗ ಹೋಬಳಿಯ ಹಲವೆಡೆ ಹದವಾದ ಮಳೆ ಸುರಿದ ಕಾರಣ, ರೈತರು ಮುಂಗಾರು ಬೆಳೆ ಬಿತ್ತನೆಗೆ ಮುಂದಾಗಿದ್ದರು.

ಎಸ್.ಎಚ್. ಗೊಲ್ಲರಹಟ್ಟಿ ಗ್ರಾಮದಲ್ಲಿ ಸುಮಾರು 150 ಎಕರೆಗೂ ಹೆಚ್ಚು ಹಸನುಗೊಂಡ ಭೂಮಿಯಲ್ಲಿ ರೈತರು ಹತ್ತಿ ಬಿತ್ತನೆ ಮಾಡಿದರು. ಹತ್ತಿ ಬೀಜಗಳು ಮೊಳಕೆ ಒಡೆದು ನಾಲ್ಕು–ಆರು ಎಲೆಗಳಿಂದ ಕಂಗೊಳಿಸುತ್ತಿದ್ದವು.

ADVERTISEMENT

ನಂತರ ಮಳೆ ಬಿದ್ದಿಲ್ಲ. ಮಿಡತೆ ಮತ್ತಿತರ ಕೀಟಬಾಧೆ ಎದುರಾಗಿದೆ. ಮಳೆ ಬಂದರೆ ಅನುಕೂಲ. ಇಲ್ಲದಿದ್ದರೆ, ಕೀಟಭಾದೆ ಹೆಚ್ಚಾದರೆ, ಎಲೆಗಳು ಕಾಣೆಯಾಗಿ ಮತ್ತೆ ಎಲ್ಲಿ, ಬೀಜಗಳನ್ನು ನಾಟಿ ಮಾಡಬೇಕಾಗುವುದೋ ಎಂಬ ಭಯ ಕಾಡುತ್ತಿದೆ ಎನ್ನುತ್ತಾರೆ ರೈತ ಪ್ರಹ್ಲಾದ.

ಹೊಸ ಪ್ರಯೋಗ: ಹತ್ತಿಯನ್ನು ಸಾಮಾನ್ಯವಾಗಿ ಎರಡೂ ಕಡೆಗಳಿಂದ ದಾಯಕ್ಕೆ ಸಾಲು ಮಾಡಿ ಬಿತ್ತನೆ ಮಾಡುವುದು ವಾಡಿಕೆ. ಆದರೆ, ಎಸ್.ಎಚ್. ಗೊಲ್ಲರಹಟ್ಟಿಯಲ್ಲಿ ಅರ್ಧದಷ್ಟು ರೈತರು ದಾಯವಿಲ್ಲದೆ ಬಿತ್ತನೆ ಮಾಡಿದ್ದಾರೆ.

‘ಜಮೀನು ಕಡಿಮೆ ಇದೆ. ಇಷ್ಟರಲ್ಲಿ ಎರಡೂ ಕಡೆ ದಾಯ ಮಾಡಿ ಬಿತ್ತನೆ ಮಾಡಿದಲ್ಲಿ ಕಡಿಮೆ ಇಳುವರಿ ಆಗುತ್ತದೆ. ಆದ್ದರಿಂದ ಒಂದು ಕಡೆ ದೊಡ್ಡ ಕುಂಟೆ ದಾಯದಲ್ಲಿ ಸಾಲು ಮಾಡಿ. ಅದರಲ್ಲಿ ಒಂದೂವರೆ ಅಡಿಯಿಂದ ಎರಡು ಅಡಿಗಳಿಗೆ ಒಂದರಂತೆ ಬೀಜವನ್ನು ಬಿತ್ತನೆ ಮಾಡಿದ್ದೇವೆ. ಇದರಿಂದ ಹತ್ತಿ ಜಾಸ್ತಿ ಆಗಬಹುದು’ ಎನ್ನುತ್ತಾರೆ ರೈತರಾದ ಮಹಾಲಿಂಗಪ್ಪ, ಕದುರಪ್ಪ, ರಾಜಪ್ಪ, ಪಾಲಾಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.