ADVERTISEMENT

ಹೆಚ್ಚಿದ ಡೆಂಗೆ ಪ್ರಕರಣ: ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2012, 5:10 IST
Last Updated 18 ಜೂನ್ 2012, 5:10 IST
ಹೆಚ್ಚಿದ ಡೆಂಗೆ ಪ್ರಕರಣ: ನಿರ್ಲಕ್ಷ್ಯ ಆರೋಪ
ಹೆಚ್ಚಿದ ಡೆಂಗೆ ಪ್ರಕರಣ: ನಿರ್ಲಕ್ಷ್ಯ ಆರೋಪ   

ಮೊಳಕಾಲ್ಮುರು: ರಾಜ್ಯಾದ್ಯಂತ ಆತಂಕ ಉಂಟು ಮಾಡಿದ್ದ ಚಿಕುನ್‌ಗುನ್ಯಾ ಕಾಯಿಲೆ `ತವರು~ ಆದ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಮತ್ತೆ ಈಗ ಡೆಂಗೆ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಆತಂಕ ಉಂಟಾಗಿದೆ.

ಕಳೆದ ಕೆಲ ದಿನಗಳಿಂದ ವಿಚಿತ್ರ ಜ್ವರ, ಸಾಂಕ್ರಾಮಿಕ ರೋಗಗಳ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಒಂದು ವಾರದಿಂದ ಶಂಕಿತ ಡೆಂಗೆ ಮತ್ತು ಡೆಂಗೆ ಖಚಿತ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಒತ್ತು ನೀಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ  ಕ್ರಮವಾಗಿ ಆರೋಗ್ಯ ಇಲಾಖೆ ಜೂನ್ 18ರಿಂದ ತಾಲ್ಲೂಕಿನಾದ್ಯಂತ ಸರ್ವೇ ಕಾರ್ಯ ಹಮ್ಮಿಕೊಂಡಿದೆ.

ತಾಲ್ಲೂಕು ಆರೋಗ್ಯ ಇಲಾಖೆ ಮೂಲಗಳು ಪ್ರಕಾರ ಶುಕ್ರವಾರದವರೆಗೆ ಕೊಂಡ್ಲಹಳ್ಳಿಯಲ್ಲಿ ಒಂದು ಡೆಂಗೆ ಪ್ರಕರಣ ಮಾತ್ರ ಕಂಡುಬಂದಿತ್ತು  ಎಂದು ಹೇಳಿಕೆ ನೀಡಿತ್ತು, ಆದರೆ ಶನಿವಾರ ದೊರೆತ ಮಾಹಿತಿಪ್ರಕಾರ ಬಿ.ಜಿ. ಕೆರೆಯ ಕುಮಾರ್ ಎಂಬ ಆರೋಗ್ಯ ಇಲಾಖೆ ನೌಕರ ಪುತ್ರನಿಗೆ ಡೆಂಗೆ ಇರುವುದು ಖಚಿತವಾಗಿದೆ. ರಾಂಪುರ ಪ್ರಾಥಮಿಕ  ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಹುಚ್ಚಪ್ಪ ನೀಡಿದ ಮಾಹಿತಿ ಪ್ರಕಾರ ಪ್ರಗತಿ, ಕಾರ್ತಿಕ್, ಪವನ್ ಕುಮಾರ್, ನಿತ್ಯಶ್ರೀ, ಸಂಗೀತ ಶಂಕರ್ ಎಂಬ ಮಕ್ಕಳಿಗೆ ಡೆಂಗೆ ಇರುವುದು ಖಚಿತವಾಗಿದ್ದು ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

ಇದೇ ಗ್ರಾಮದ ಸಂಗೀತ ಎಂಬ ಬಾಲಕಿಗೆ ಡೆಂಗೆ ಖಚಿತವಾಗಿದೆ. ಇವರೆಲ್ಲಾ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಮುಂಜಾಗ್ರತಾ ಕ್ರಮವಾಗಿ ರಾಂಪುರದಲ್ಲಿ 500ಕ್ಕೂ ಹೆಚ್ಚು ಮನೆಗಳಲ್ಲಿ ಸೊಳ್ಳೆ ಲಾರ್ವ ಸರ್ವೇ ಮಾಡಲಾಗಿದೆ. ಈ ಪೈಕಿ 35-40 ಮನೆಗಳಲ್ಲಿ ಲಾರ್ವ ಕಂಡುಬಂದಿದೆ. ಇಲ್ಲಿ ಸ್ವಚ್ಛತೆ ಪೂರ್ಣವಾಗಿ ಇಲ್ಲದಾಗಿದೆ. ಇದು ರೋಗ ಹರಡಲು ಪ್ರಮುಖ ಕಾರಣವಾಗಿದ್ದು ಫಾಗಿಂಗ್ ಮಾಡಿಸಲಾಗುವುದು ಎಂದು ಹುಚ್ಚಪ್ಪ ತಿಳಿಸಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದ್ ಮಾಹಿತಿ ನೀಡಿ, ತಾಲ್ಲೂಕಿನ 96 ಗ್ರಾಮಗಳ ಒಟ್ಟು 26,800 ಮನೆಗಳ ಲಾರ್ವ, ಆರೋಗ್ಯ ಪರೀಕ್ಷೆ ಮತ್ತು ಮುಂಜಾಗ್ರತಾ ಮಾಹಿತಿ ಸರ್ವೇ ಕಾರ್ಯ ಜೂ.18-25ರ ವರೆಗೆ ನಡೆಯಲಿದೆ. ಇದಕ್ಕಾಗಿ ತಲಾ ಇಬ್ಬರು ಇರುವ ಒಟ್ಟು 48 ತಂಡಗಳನ್ನು ರಚಿಸಲಾಗಿದೆ, ಅಗತ್ಯವಿರುವ `ಅಬೆಟ್ ದ್ರಾವಣ~ ಫಾಗಿಂಗ್‌ಗೆ ಬೇಕಿರುವ `ಫೈರಥಿನ್ ಎಕ್ರಾಕ್ಟ್~ ದಾಸ್ತಾನು ಮಾಡಲಾಗಿದೆ. ಸಮಸ್ಯೆ ಇರುವ ಎಲ್ಲಾ ಕಡೆ ಫಾಗಿಂಗ್ ಮಾಡಲಾಗುವುದು, ಈ ಬಗ್ಗೆ ಪಿಡಿಒ, ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದರು.

ಉದ್ಯೋಗಖಾತ್ರಿ ಯೋಜನೆ ಜಾರಿ ನಂತರ ಅಭಿವೃದ್ಧಿ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ಚರಂಡಿಗಳನ್ನು ಮಾಡಿಸಿರುವ ಗ್ರಾ.ಪಂ.ಗಳು ಅವುಗಳನ್ನು ಸ್ವಚ್ಛಗೊಳಿಸಲು ಅಷ್ಟಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ಎಂ.ಡಿ. ಮಂಜುನಾಥ್ ಆರೋಪ ಮಾಡುತ್ತಾರೆ.

ಬರ ಸ್ಥಿತಿ ಮೇಲೆ ಬರೆ ಎಳೆಯುತ್ತಿರುವ ಈ ಸಮಯದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.