ADVERTISEMENT

ಸ್ಪರ್ಧಾತ್ಮಕ ಜಗತ್ತನ್ನು ಸ್ಪರ್ಧೆಯಿಂದ ಎದುರಿಸಿ

ಸಾಧಕರೊಂದಿಗೆ ಸಂವಾದದಲ್ಲಿ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷೆ ಅರುಣ ಸಿ ನ್ಯೂಟನ್

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 15:32 IST
Last Updated 13 ಜುಲೈ 2019, 15:32 IST
ಚಿತ್ರದುರ್ಗದ ಎಸ್‌ಆರ್‌ಎಸ್ ಕಾಲೇಜಿನಲ್ಲಿ ಶನಿವಾರ ನಡೆದ ‘ಸಾಧಕರೊಂದಿಗೆ ಸಂವಾದ-2019’ ಕಾರ್ಯಕ್ರಮವನ್ನು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷೆ ಅರುಣ ಸಿ ನ್ಯೂಟನ್ ಉದ್ಘಾಟಿಸಿದರು. 
ಚಿತ್ರದುರ್ಗದ ಎಸ್‌ಆರ್‌ಎಸ್ ಕಾಲೇಜಿನಲ್ಲಿ ಶನಿವಾರ ನಡೆದ ‘ಸಾಧಕರೊಂದಿಗೆ ಸಂವಾದ-2019’ ಕಾರ್ಯಕ್ರಮವನ್ನು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷೆ ಅರುಣ ಸಿ ನ್ಯೂಟನ್ ಉದ್ಘಾಟಿಸಿದರು.    

ಚಿತ್ರದುರ್ಗ: ‘ದೇಶದಲ್ಲಿ ಜನಸಂಖ್ಯೆ ಹೆಚ್ಚಿದಂತೆಲ್ಲ ಸ್ಪರ್ಧೆಯೂ ಅಧಿಕವಾಗುತ್ತಿದ್ದು, ಅದನ್ನು ಸ್ಪರ್ಧಾತ್ಮಕವಾಗಿಯೇ ಎದುರಿಸಲು ಮುಂದಾಗಿ’ ಎಂದು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯ ಉಪಾಧ್ಯಕ್ಷೆ ಅರುಣ ಸಿ ನ್ಯೂಟನ್ ಸಲಹೆ ನೀಡಿದರು.

ಎಸ್‌ಆರ್‌ಎಸ್ ಪಿಯು ಕಾಲೇಜು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಸಾಧಕರೊಂದಿಗೆ ಸಂವಾದ-2019’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ದಿನಗಳು ಸುಮ್ಮನೆ ಕೂರುವ ಕಾಲವಲ್ಲ. ಸ್ಪರ್ಧೆ ಇದ್ದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಅದಕ್ಕಾಗಿ ಹೆಚ್ಚಿನ ನೈಪುಣ್ಯತೆ ಬೆಳೆಸಿಕೊಳ್ಳಿ. ವಿಶ್ವದಲ್ಲೇ ಭಾರತ ಅತ್ಯಧಿಕ ಯುವಸಮೂಹವನ್ನು ಹೊಂದಿದ್ದು, ಅಧಿಕ ಜನಸಂಖ್ಯೆ ದೇಶಕ್ಕೆ ಮಾರಕವಾಗದೆ, ಪ್ರಗತಿಗೆ ಪೂರಕವಾಗಲು ನಿಮ್ಮಿಂದ ಸಾಧ್ಯವಿದೆ. ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆಗಳೊಂದಿಗೆ ಸಾಗಿ’ ಎಂದರು.

ADVERTISEMENT

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಬಿ.ನಂದಗಾವಿ, ‘ಪೋಷಕರು ಮಕ್ಕಳಲ್ಲಿ ಬರಿ ಎಂಜಿನಿಯರ್, ವೈದ್ಯಕೀಯ ಕ್ಷೇತ್ರದ ಆಯ್ಕೆಗಳನ್ನು ಮಾತ್ರ ನೀಡದೆ, ಇಷ್ಟಪಡುವಂಥ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಲು ಪ್ರೋತ್ಸಾಹಿಸಿ’ ಎಂದು ಹೇಳಿದರು.

ಇನ್ಫೋಸಿಸ್‌ನ ಎಂಜಿನಿಯರ್ ಬಿ.ಮಹೇಶ್‌ಕುಮಾರ್, ‘ಹಣಕ್ಕಿಂತ ಗೌರವಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರಿಂದ ನಾರಾಯಣಮೂರ್ತಿ ಅವರು ದೊಡ್ಡಮಟ್ಟದ ಸಾಧಕರಾಗಲು ಸಾಧ್ಯವಾಯಿತು. ನೀವು ಕೂಡ ನಿಮ್ಮಲ್ಲಿರುವ ಪ್ರತಿಭೆ ಹೊರಹಾಕಿ ಉತ್ತಮ ಸಾಧಕರಾಗಿ’ ಎಂದು ಆರೈಸಿದರು.

2019ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಓಲ್‌ವಿಟಾ ಡಿಸೋಜಾ, ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದ ತುಳಸಿ, ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಪಡೆದ ಪ್ರಗ್ಯಾ ಮಿತ್ರ, ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ರಮ್ಯಾ, ಅವಿನಾಶ್‌ಕುಮಾರ್, ಸಿದ್ಧಾರ್ಥನಾಯಕ್, ಜೆಇಇ ನಾಟಾ ಪರೀಕ್ಷೆಯಲ್ಲಿ ದೇಶಕ್ಕೆ 18ನೇ ರ‍್ಯಾಂಕ್ ಗಳಿಸಿದ ಗಗನ್‌ದೀಪ್, ವಿವಿಧ ವಿಷಯಗಳಲ್ಲಿ 100ಕ್ಕೆ ನೂರು ಅಂಕಗಳಿಸಿದ ಒಟ್ಟು 25 ಮಂದಿ ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಉಪಾಧ್ಯಕ್ಷ ಬಿ.ಎಲ್.ಅಮೋಘ್, ಆಡಳಿತಾಧಿಕಾರಿ ಡಾ.ರವಿ, ಸಂಚಾಲಕ ನಟರಾಜ್, ಪಿಯು ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.