ADVERTISEMENT

ಮಹಾರಾಷ್ಟ್ರ ಬಸ್‌ ತಡೆದು ಚಾಲಕನ ಮುಖಕ್ಕೆ ಮಸಿ: 10 ಮಂದಿ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2025, 8:45 IST
Last Updated 22 ಫೆಬ್ರುವರಿ 2025, 8:45 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಚಿತ್ರದುರ್ಗ: ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್‌ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡಿಸಿ ನವ ನಿರ್ಮಾಣ ಸೇನೆ ಕಾರ್ಯಕರ್ತರು ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ– 48ರ ಗುಯಿಲಾಳ ಟೋಲ್‌ನಲ್ಲಿ ಮಹಾರಾಷ್ಟ್ರ ಬಸ್‌ ತಡೆದು ಚಾಲಕನಿಗೆ ಮಸಿ ಬಳಿದಿದ್ದಾರೆ. ಘಟನೆ ಸಂಬಂಧ ಐಮಂಗಲ ಠಾಣೆ ಪೊಲೀಸರು ಶನಿವಾರ 10 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ADVERTISEMENT

ಮರಾಠಿಗರು ಪುಂಡಾಟ ನಡೆಸಿದ್ದಾರೆ ಎಂದು ಆರೋಪಿಸಿ ನವನಿರ್ಮಾಣ ಸೇನೆ ಸದಸ್ಯರು ಹಿರಿಯೂರು ತಾಲ್ಲೂಕು ಗುಯಿಲಾಳ ಟೋಲ್‌ ಬಳಿ ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ತಡೆದ ಕಾರ್ಯಕರ್ತರು ಇಡಿ ಬಸ್‌ಗೆ ಕಪ್ಪು ಬಣ್ಣದ ಸ್ಪ್ರೇ ಸಿಂಪಡಿಸಿದರು. ‘ಜೈ ಕರ್ನಾಟಕ, ಜೈ ಕನ್ನಡ, ಬೆಳಗಾವಿ ನಮ್ಮದು ಮರಾಠಿಗರು ಪುಂಡಾಟಿಕೆ ನಿಲ್ಲಿಸಬೇಕು’ ಎಂದು ಬಸ್‌ ಮೇಲೆ ಬರೆದರು. ಬಸ್‌ ಚಾಲಕ ಹರಿ ಜಾದವ್‌ ಮುಖಕ್ಕೂ ಮಸಿ ಬಳಿದರು.

ಚಾಲಕ ಐಮಂಗಲ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿನವ ನಿರ್ಮಾಣ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡ ಲಕ್ಷ್ಮಿಕಾಂತ್‌ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ.

ಮತ್ತೊಂದು ಬಸ್‌ ತಡೆಯಲು ಯತ್ನ:

ಬೆಂಗಳೂರಿನಿಂದ ಬೆಳಗಾವಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ ತಡೆದು ಪ್ರತಿಭಟನೆ ನಡೆಸಲು ಕರುನಾಡ ವಿಜಯಸೇನೆ ಸದಸ್ಯರು ಮುಂದಾಗಿದ್ದರು. ನಗರದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣಕ್ಕೆ ಬಂದ ಕಾರ್ಯಕರ್ತರನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.