ADVERTISEMENT

ಚಿತ್ರದುರ್ಗ: ರಸ್ತೆಗಿಳಿದ 170 ಕೆಎಸ್‌ಆರ್‌ಟಿಸಿ ಬಸ್

15ನೇ ದಿನವೂ ಕರ್ತವ್ಯಕ್ಕೆ ಹಾಜರಾಗದ ಕೆಎಸ್‌ಆರ್‌ಟಿಸಿಯ 850 ನೌಕರರು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 5:33 IST
Last Updated 22 ಏಪ್ರಿಲ್ 2021, 5:33 IST
ಚಿತ್ರದುರ್ಗದ ಬಸ್‌ ನಿಲ್ದಾಣದಲ್ಲಿ ಬುಧವಾರ ಊರುಗಳಿಗೆ ಮರಳಲು ಬಸ್‌ಗಾಗಿ ಕಾಯುತ್ತ ಕುಳಿತಿದ್ದ ಪ್ರಯಾಣಿಕರು
ಚಿತ್ರದುರ್ಗದ ಬಸ್‌ ನಿಲ್ದಾಣದಲ್ಲಿ ಬುಧವಾರ ಊರುಗಳಿಗೆ ಮರಳಲು ಬಸ್‌ಗಾಗಿ ಕಾಯುತ್ತ ಕುಳಿತಿದ್ದ ಪ್ರಯಾಣಿಕರು   

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಚಿತ್ರದುರ್ಗ ವಿಭಾಗದ ಬಹುತೇಕ ಬಸ್‌ಗಳು ಬುಧವಾರ ರಸ್ತೆಗೆ ಇಳಿದವು. ಹೀಗಾಗಿ 170 ಬಸ್‌ಗಳು ರಾಜ್ಯದ ವಿವಿಧೆಡೆ ಸಂಚಾರ ನಡೆಸಿದವು. ಪ್ರಯಾಣಿಕರ ಸಂಖ್ಯೆಯಲ್ಲೂ ನಿತ್ಯ ಏರಿಕೆಯಾಗುತ್ತಿದ್ದು, ಇಲ್ಲಿನ ಬಸ್ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರು ಇದ್ದರು.

ಆರನೇ ವೇತನ ಆಯೋಗಕ್ಕೆ ಪಟ್ಟುಹಿಡಿದಿರುವ ಸಾರಿಗೆ ನೌಕರರು ಮುಷ್ಕರವನ್ನು ಹದಿನೈದನೇ ದಿನವೂ ಮುಂದುವರಿಸಿದ್ದಾರೆ. ಹೀಗಾಗಿ 850 ನೌಕರರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಆದರೆ, ಬುಧವಾರ ಇನ್ನೂ 100 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು, ಏ.22ರಂದು ಇನ್ನಷ್ಟು ನೌಕರರು ಹಾಜರಾಗುವ ಸಾಧ್ಯತೆ ಇದೆ.

ವಿಭಾಗ ವ್ಯಾಪ್ತಿಯ 294 ಬಸ್‌ಗಳ ಪೈಕಿ ಧರಣಿ ಕೈಗೊಂಡ ಹದಿನಾಲ್ಕನೇ ದಿನ 105 ಬಸ್‌ಗಳು ಸಂಚರಿಸಿದ್ದವು. ಬುಧವಾರದಿಂದ ಒಟ್ಟು 270ಕ್ಕೂ ಹೆಚ್ಚು ನೌಕರರು ಆಸಕ್ತಿ ತೋರಿದ ಪರಿಣಾಮ 170 ಬಸ್‌ಗಳು ರಸ್ತೆಗೆ ಇಳಿದವು.

ADVERTISEMENT

ಒಟ್ಟು 260 ಮಾರ್ಗಗಳಿದ್ದು, ಅದರಲ್ಲಿ 150ಕ್ಕೂ ಹೆಚ್ಚು ಮಾರ್ಗಗಳಲ್ಲಿ ಸಂಚಾರ ಮೊದಲಿನಂತೆ ಆರಂಭವಾಗಿದೆ. ಚಿತ್ರದುರ್ಗ ಸೇರಿ ನಾಲ್ಕು ಡಿಪೊಗಳ ಬಸ್‌ಗಳು ಬೆಂಗಳೂರು, ದಾವಣಗೆರೆ, ಭರಮಸಾಗರ, ಶಿವಮೊಗ್ಗ, ಚನ್ನಗಿರಿ, ಹೊಸದುರ್ಗ, ಚಳ್ಳಕೆರೆ, ಪಾವಗಡ, ಹೊಸಪೇಟೆ ಮಾರ್ಗವಾಗಿ ಸಂಚರಿಸಿದವು. ಬೇರೆ ವಿಭಾಗದ ಬಸ್‌ಗಳು ಇಲ್ಲಿಂದ ಹಾವೇರಿ, ಧಾರಾವಾಡ, ಹುಬ್ಬಳ್ಳಿ, ಕಲಬುರ್ಗಿ, ಬೆಳಗಾವಿ ಮಾರ್ಗವಾಗಿ ಸಂಚರಿಸಿದವು.

ಕರ್ತವ್ಯಕ್ಕೆ ಹಾಜರಾಗಲು ದಿನೇ ದಿನೇ ನೌಕರರು ಆಸಕ್ತಿ ತೋರುತ್ತಿರುವ ಕಾರಣ ಶೇ 60ರಷ್ಟು ಬಸ್‌ಗಳು ರಸ್ತೆಗೆ ಇಳಿದಿವೆ. ಒಂದು ವಾರದಲ್ಲಿ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಡಿಪೊ ವ್ಯವಸ್ಥಾಪಕ ಎಂ.ಹೊನ್ನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಭಾಗಕ್ಕೆ ₹ 4.5 ಕೋಟಿ ನಷ್ಟ
‘ಕೆಎಸ್ಆರ್‌ಟಿಸಿ ನೌಕರರ ಮುಷ್ಕರದ ಪರಿಣಾಮ ಚಿತ್ರದುರ್ಗ ವಿಭಾಗವೊಂದಕ್ಕೆ ಪ್ರತಿ ದಿನ ₹ 30 ಲಕ್ಷ ನಷ್ಟ ಸಂಭವಿಸಿದೆ. 15 ದಿನಗಳಲ್ಲಿ ವಿಭಾಗ ₹ 4.5 ಕೋಟಿ ನಷ್ಟ ಅನುಭವಿಸಿದೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯ್‌ಕುಮಾರ್ ತಿಳಿಸಿದ್ದಾರೆ.

‘ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಲ್ಲಿ ಮನವಿ ಮಾಡಲಾಗುತ್ತಿದೆ. ಇನ್ನೊಂದೆರಡು ದಿನಗಳಲ್ಲಿ ಶೇ 80ರಷ್ಟು ನೌಕರರು ಕರ್ತವ್ಯಕ್ಕೆ ಮರಳುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.