ADVERTISEMENT

ಅಲೆಮಾರಿ–ಅರೆ ಅಲೆಮಾರಿಗಳಿಗೆ 4,448 ಮನೆ ಮಂಜೂರು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 4:07 IST
Last Updated 30 ಸೆಪ್ಟೆಂಬರ್ 2020, 4:07 IST
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸದ ಎ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಹಿರಿಯೂರಿನ ಹುಳಿಯಾರು ರಸ್ತೆಯಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಸದ ಎ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.   

ಹಿರಿಯೂರು: ತಾಲ್ಲೂಕಿನ ಅಲೆಮಾರಿ– ಅರೆ ಅಲೆಮಾರಿ, ವಿಶೇಷವಾಗಿ ಗೊಲ್ಲ ಸಮುದಾಯದ ಅರ್ಹ ಫಲಾನುಭವಿಗಳಿಗೆ 4,448 ಮನೆಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ನಗರದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಪಿಡಿಒಗಳ ಜವಾಬ್ದಾರಿ ಹೆಚ್ಚಿನದ್ದಿದೆ. ತಾಲ್ಲೂಕಿನಲ್ಲಿರುವ ಬಹುತೇಕ ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಗುಡಿಸಲುಗಳಲ್ಲಿ ವಾಸಿಸುವವರೇ ಹೆಚ್ಚಿದ್ದಾರೆ. ವಸತಿ ಸಚಿವರೊಂದಿಗೆ ಚರ್ಚಿಸಿದಾಗ ನಮ್ಮ ಬೇಡಿಕೆಗೆ ಸ್ಪಂದಿಸಿ ಮನೆಗಳಿಗೆ ಮಂಜೂರಾತಿ ನೀಡಿದ್ದಾರೆ’ ಎಂದರು.

ADVERTISEMENT

‘ಹಿಂದೆ ಅಲೆಮಾರಿಗಳ ಪಟ್ಟಿ ತಯಾರಿಸಿದ್ದರೂ ಅನುಷ್ಠಾನಗೊಳ್ಳಲಿಲ್ಲ. ಪಿಡಿಒಗಳು ಲೋಪಕ್ಕೆ ಅವಕಾಶ ಕೊಡದೆ ಅರ್ಹ ಫಲಾನುಭವಿಗಳ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ರೇಷನ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪಡೆದು ಅ. 10ರ ಒಳಗೆ ನಿಗಮಕ್ಕೆ ಕಳಿಸಬೇಕು’ ಎಂದು ತಾಕೀತು ಮಾಡಿದರು.

‘ಅಲೆಮಾರಿ ಯೋಜನೆ ಹೊರತುಪಡಿಸಿ ಇತರೆ ವರ್ಗಗಳ ಸೂರು ರಹಿತರಿಗೆ ಮಂಜೂರಾ ಗಿರುವ 2 ಸಾವಿರ ಫಲಾನುಭವಿಗಳ ಪಟ್ಟಿಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಿಂದ ತಯಾರಿಸಿ ಸರ್ಕಾರಕ್ಕೆ ಕಳುಹಿಸಬೇಕು. ಕೆಲವು ಹಳ್ಳಿಗಳಲ್ಲಿ ಸ್ಮಶಾನಕ್ಕೆ ಜಾಗದ ಸಮಸ್ಯೆ ಇರುವುದು ಕಂಡು ಬಂದಿದ್ದು, ಅದರ ಮಾಹಿತಿ ಕೊಡಿ. ಹಿಂದಿನ ವರ್ಷ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿರುವವರಿಗೆ ಬಾಕಿ ಇರುವ ಬಿಲ್ ಗಳನ್ನು ತಕ್ಷಣ ಪಾವತಿಸಿ’ ಎಂದು ಸೂಚಿಸಿದರು.

ಸಂಸದ ಎ.ನಾರಾಯಣಸ್ವಾಮಿ, ‘ವಸತಿ ಯೋಜನೆ ಯಶಸ್ವಿಯಾಗಲು ಫಲಾನುಭವಿಗಳ ಪಟ್ಟಿಯ ಪುನರ್ ಪರಿಶೀಲನೆಯಾಗಬೇಕು.ಯಾರಿಗೆ ಸ್ವಂತ ನಿವೇಶನವಿದೆ, ಖಾತೆ ಯಾರ ಹೆಸರಿಗಿದೆ, ಯಾರಿಗೆ ನಿವೇಶನವೇ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡರೆ ಮಾತ್ರ ಅರ್ಹರಿಗೆ ಪ್ರಯೋಜನವಾಗುತ್ತದೆ’ ಎಂದರು.

ಸಭೆಯಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ತಾ.ಪಂ. ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.