ADVERTISEMENT

ಸೂರಗೊಂಡನಕೊಪ್ಪ: ಹರಿದು ಬರುತ್ತಿರುವ ಭಕ್ತರು

ಡಿ.ಎಂ.ಹಾಲಾರಾಧ್ಯ
Published 10 ಫೆಬ್ರುವರಿ 2018, 9:15 IST
Last Updated 10 ಫೆಬ್ರುವರಿ 2018, 9:15 IST
ಸಂತ ಸೇವಾಲಾಲರ ದೇವಸ್ಥಾನ (
ಸಂತ ಸೇವಾಲಾಲರ ದೇವಸ್ಥಾನ (   

ನ್ಯಾಮತಿ: ಬಣಜಾರ(ಲಂಬಾಣಿ) ಜನಾಂಗದ ಏಕೈಕ ಜಗದ್ಗುರು ಸಂತ ಸೇವಾಭಾಯ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪದಲ್ಲಿ ಇದೇ 13,14 ಮತ್ತು 15ರಂದು ಅವರ 279ನೇ ಜಯಂತ್ಯುತ್ಸವ ಅದ್ದೂರಿಯಾಗಿ ನಡೆಯಲಿದೆ. ನ್ಯಾಮತಿ ಸಮೀಪದ ಸೂರಗೊಂಡನಕೊಪ್ಪಕ್ಕೆ ದೇಶದ ಮೂಲೆ ಮೂಲೆಗಳಿಂದ ಸೇವಾಲಾಲ್‌ ಭಕ್ತರು ಪಾದಯಾತ್ರೆ, ವಿವಿಧ ವಾಹನಗಳ ಮೂಲಕ ಬರುತ್ತಿದ್ದಾರೆ.

ಬಣಜಾರ ಸಮೂಹಕ್ಕೆ ಇದೊಂದೇ ಪವಿತ್ರ ಧಾರ್ಮಿಕ ಕ್ಷೇತ್ರ. ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಸೇವಾಲಾಲ್‌ ಮತ್ತು ಮರಿಯಮ್ಮ ದೇವಿ ಜಾತ್ರೆ ನಡೆಸಲು ಸಕಲ ಸಿದ್ಧತೆ ನಡೆಯುತ್ತಿದೆ. 13ರ ಶಿವರಾತ್ರಿಯಂದು ಸೇವಾಲಾಲ್‌ ನಿಶಾನೆ ಉದ್ಘಾಟನೆ, 14ರ ಬೆಳಿಗ್ಗೆ ಕುಂಭಾಭಿಷೇಕ, ವಿವಿಧ ಪೂಜೆ ಹಾಗೂ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

14ರ ಮಧ್ಯಾಹ್ನ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಲಿದ್ದು, ಗಣ್ಯರಾದ ಡಿ.ಎಚ್‌.ಶಂಕರಮೂರ್ತಿ, ಎಚ್‌.ಆಂಜನೇಯ, ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಮನೂರು ಶಿವಶಂಕರಪ್ಪ, ಎಚ್‌.ಕೆ.ಪಾಟೀಲ, ಎಂ.ಬಿ.ಪಾಟೀಲ, ರುದ್ರಪ್ಪ ಮಾನಪ್ಪ ಲಮಾಣಿ,ಡಾ.ಉಮೇಶ ಜಾದವ್‌, ಜಿ.ಎಂ.ಸಿದ್ದೇಶ್ವರ ಹಾಗೂ ಬಂಜಾರ ಸಮಾಜದ ಶಾಸಕರು, ಜನಪ್ರತಿನಿಧಿಗಳು, ಸಮಾಜದ ಗಣ್ಯರು, ಜಿಲ್ಲಾ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಬರಲಿದ್ದಾರೆ.

ADVERTISEMENT

ಈ ಸಂಬಂಧ ದಾವಣಗೆರೆ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ, ಜಿಲ್ಲಾ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಹೀರಾನಾಯ್ಕ, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಲವು ಬಾರಿ ಸೂರಗೊಂಡನ ಕೊಪ್ಪಕ್ಕೆ ಭೇಟಿ ನೀಡಿ ಸಭೆ ನಡೆಸಿ ಬರುವ ಭಕ್ತರಿಗೆ ಮೂಲಸೌಕರ್ಯ ಹಾಗೂ ಅನ್ನಸಂತರ್ಪಣೆ, ವಾಹನ ಸೌಕರ್ಯ, ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ ಎಂದು ತಾಲ್ಲೂಕು ಬಣಜಾರ ಸಮಾಜದ ಅಧ್ಯಕ್ಷ ಎಚ್‌.ಕೆ.ದೂದ್ಯಾನಾಯ್ಕ ತಿಳಿಸಿದರು.

ಈಗಾಗಲೇ ಸೂರಗೊಂಡನಕೊಪ್ಪದಲ್ಲಿ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ದೇವಸ್ಥಾನ ಅಭಿವೃದ್ಧಿ, ಗೃಹ ನಿರ್ಮಾಣ, ಸಂತ ಸೇವಾಲಾಲ್‌ರ ಜನ್ಮದಿಂದ ಅಂತ್ಯದವರೆಗಿನ ಪವಾಡವನ್ನು ಸಾರುವ ಕಲಾಕೃತಿಗಳ ನಿರ್ಮಾಣ, ಸುಂದರ ಪ್ರವೇಶದ್ವಾರ ನಿರ್ಮಾಣ ಕಾರ್ಯ ನಡೆದಿರುವುದು ಕ್ಷೇತ್ರಕ್ಕೆ ಬರುವ ಭಕ್ತರ ಮನಕ್ಕೆ ಮುದ ನೀಡುತ್ತದೆ.

ಜಿಲ್ಲಾಡಳಿತ ದಾವಣಗೆರೆ, ಸಂತ ಸೇವಾಲಾಲ್‌ ಪ್ರತಿಷ್ಠಾನ, ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ಬೆಂಗಳೂರು ಹಾಗೂ ಸಂತ ಸೇವಾಲಾಲ್‌ ಜನ್ಮಸ್ಥಾನ ಮಹಾಮಠ ಸಮಿತಿಯವರು ಜಂಟಿಯಾಗಿ ಮೂರು ದಿನದ ಕಾರ್ಯಕ್ರಮಗಳ ಉಸ್ತುವಾರಿ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.