ADVERTISEMENT

ಷರತ್ತು ಉಲ್ಲಂಘಿಸದೆ ಮರಳು ಪೂರೈಸಿ

ಅಧಿಕಾರಿಗಳು, ಮರಳು ಹರಾಜುದಾರರ ಸಭೆಯ ತಹಶೀಲ್ದಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 10:20 IST
Last Updated 11 ಫೆಬ್ರುವರಿ 2018, 10:20 IST

ಹಿರಿಯೂರು: ತಾಲ್ಲೂಕಿನಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಮರಳಿನ ಬೇಡಿಕೆ ಹೆಚ್ಚಿದೆ. ಗ್ರಾಹಕರ ಅಗತ್ಯ ಪೂರೈಸಲು ಹಾಗೂ ಅಕ್ರಮ ಮರಳುದಂಧೆ ತಡೆಯಲು ವೇದಾವತಿ ನದೀ ಪಾತ್ರದಲ್ಲಿ ಇ–ಹರಾಜು ಮೂಲಕ ಗುತ್ತಿಗೆ ಪಡೆದಿರುವ ಹರಾಜುದಾರರು ಸರ್ಕಾರಿ ನಿಯಮಾನುಸಾರ ಮರಳು ಎತ್ತುವಳಿ ಮಾಡಬೇಕು ಎಂದು ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ ತಾಕೀತು ಮಾಡಿದರು.

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವೇದಾವತಿ ನದೀ ಪಾತ್ರದಲ್ಲಿನ ಮರಳು ಎತ್ತುವಳಿ ಮಾಡುವ ಕುರಿತು ನಡೆದ ಅಧಿಕಾರಿಗಳು ಹಾಗೂ ಹರಾಜುದಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಹೂವಿನಹೊಳೆ ಗ್ರಾಮದಲ್ಲಿ 2, ಬಿದರಕೆರೆ 2, ಹೊಸಹಳ್ಳಿ 2 ಹಾಗೂ ಸಾಲುಹುಣಿಸೆ ಗ್ರಾಮದ ಸಮೀಪ 1 ಮರಳು ಬ್ಲಾಕ್ ಗಳನ್ನು ಇ–ಹರಾಜು ಹಾಕಲಾಗಿದೆ. ತಾಲ್ಲೂಕಿನಲ್ಲಿ ಮರಳಿನ ಅಗತ್ಯ ಹೆಚ್ಚಿದ್ದು, ಸರ್ಕಾರಿ ನಿಯಮ ಹಾಗೂ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಆದೇಶ ಮತ್ತು ಷರತ್ತುಗಳನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸದೆ ತುರ್ತಾಗಿ ಮರಳನ್ನು ಎತ್ತುವಳಿ ಮಾಡಬೇಕು. ನದೀ ದಂಡೆಯಿಂದ 200 ಮೀಟರ್ ಅಂತರದಲ್ಲಿರುವ ಮರಳು ಸ್ಟಾಕ್ ಯಾರ್ಡ್‌ನಲ್ಲಿ ಸಂಗ್ರಹಿಸಬೇಕು. ತಾಲ್ಲೂಕಿಗೆ ಪ್ರಥಮ ಆದ್ಯತೆ ನೀಡಿ ಮರಳು ವಿತರಣೆ ಮಾಡಬೇಕು ಎಂದು ಹರಾಜುದಾರರಿಗೆ ಸೂಚಿಸಿದರು.

ADVERTISEMENT

ಮರಳು ಎತ್ತುವಳಿ ಮಾಡುವಾಗ ಸುತ್ತಮುತ್ತ ಗ್ರಾಮಗಳಲ್ಲಿನ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಮರಳು ಅವಶ್ಯಕತೆ ಇರುವ ಸಾರ್ವಜನಿಕರು ಮರಳು ಸ್ಟಾಕ್ ಯಾರ್ಡ್‌ನಲ್ಲಿ ಉತ್ತಮ ಗುಣಮಟ್ಟದ ಮರಳು ಪಡೆಯಬಹುದು ಎಂದು ವೆಂಕಟೇಶಯ್ಯ ತಿಳಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.