ADVERTISEMENT

40 ಶಿಲ್ಪಿಗಳ ಕೆತ್ತನೆಯಲ್ಲಿ ಅರಳಿದ ಭಾರತಾಂಬೆ ತೇರು

ಬೆಲಗೂರಿನ ಮಾರುತಿ ಪೀಠದಲ್ಲಿ ನಿರ್ಮಾಣಗೊಂಡ ರಥ ಲೋಕಾರ್ಪಣೆ ಇಂದು

ಎಸ್.ಸುರೇಶ್ ನೀರಗುಂದ
Published 8 ಡಿಸೆಂಬರ್ 2019, 20:45 IST
Last Updated 8 ಡಿಸೆಂಬರ್ 2019, 20:45 IST
ಹೊಸದುರ್ಗ ತಾಲ್ಲೂಕಿನ ಬೆಲಗೂರಿನಲ್ಲಿ ನಿರ್ಮಾಣವಾಗಿರುವ ಭಾರತಾಂಬೆ ತೇರು
ಹೊಸದುರ್ಗ ತಾಲ್ಲೂಕಿನ ಬೆಲಗೂರಿನಲ್ಲಿ ನಿರ್ಮಾಣವಾಗಿರುವ ಭಾರತಾಂಬೆ ತೇರು   

ಹೊಸದುರ್ಗ: ತಾಲ್ಲೂಕಿನ ಬೆಲಗೂರು ಗ್ರಾಮದಲ್ಲಿ ₹ 3.5 ಕೋಟಿ ವೆಚ್ಚದಲ್ಲಿ ಭಾರತಾಂಬೆ ತೇರು ನಿರ್ಮಾಣಗೊಂಡಿದೆ.

ಗ್ರಾಮದ ಮಾರುತಿ ಪೀಠದ ಅವಧೂತ ಬಿಂದು ಮಾದವಶರ್ಮ ಸ್ವಾಮೀಜಿ ಮಾರ್ಗದರ್ಶನಲ್ಲಿ ಈ ತೇರು ನಿರ್ಮಾಣವಾಗಿದೆ. ಇಲ್ಲಿನ ಐತಿಹಾಸಿಕ ವೀರಪ್ರತಾಪ ಆಂಜನೇಯ ಹಾಗೂ ಲಕ್ಷ್ಮೀನಾರಾಯಣ ಸ್ವಾಮಿಯ ಈ ಬೃಹತ್‌ ರಥಕ್ಕೆ ಭಾರತಾಂಬೆ ತೇರು ಎಂದು ಹೆಸರಿಡಲಾಗಿದೆ. 59 ಅಡಿ ಎತ್ತರ, 21 ಅಡಿ ಅಗಲ ಹಾಗೂ ಸುಮಾರು 75 ಸಾವಿರ ಕೆ.ಜಿ ತೂಕವಿರುವ ಈ ರಥಕ್ಕೆ ಸಾಗುವಾನಿ, ಹೊನ್ನೆ ಮತ್ತು ಕಿರಾಲುಬೋಗಿ ಮರಗಳನ್ನು ಉಪಯೋಗಿಸಲಾಗಿದೆ. ಉಡುಪಿಯ ರಾಜಶೇಖರ್‌ ಹೆಬ್ಬಾರ್‌ ಸೇರಿ 40 ಮಂದಿ ಶಿಲ್ಪಿಗಳು ಕೆತ್ತನೆ ಕಾರ್ಯ ಮಾಡಿದ್ದಾರೆ.

ಈ ತೇರಿನಲ್ಲಿ ದೇಶಕ್ಕಾಗಿ ದುಡಿದಿರುವ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಕರು, ದಾಸಶ್ರೇಷ್ಠರು, ರಾಜರು, ಸ್ವಾತಂತ್ರ್ಯ ಹೋರಾಟಗಾರರು, ದೇಶಭಕ್ತರು, ಶಿವಶರಣರು, ಅವಧೂತರು, ಸಿದ್ಧರು, ಮುನಿಗಳು, ಸಾಧು–ಸಂತರು, ಕಲಾವಿದರು, ಕವಿಗಳು, ಸಾಹಿತಿಗಳು, ವಿದ್ವಾಂಸರು, ವಿಜ್ಞಾನಿ, ಎಂಜಿನಿಯರ್‌, ಕಲಾವಿದರು ಸೇರಿ ಸುಮಾರು 221 ಮಹನೀಯಯರ ಉಬ್ಬು ಶಿಲ್ಪಗಳನ್ನು(ವಿಗ್ರಹ) ಅಳವಡಿಸಲಾಗಿದೆ. ಇದು ಅಪ್ಪಟ ರಾಷ್ಟ್ರಪ್ರೇಮದ ತೇರು ಆಗಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ.

ADVERTISEMENT

‘ಈ ತೇರಿನಲ್ಲಿ 4 ದ್ವಾರಗಳಿವೆ. ಮೊದಲನೇಯದರಲ್ಲಿ ಲಕ್ಷ್ಮೀನಾರಾಯಣ, ಎರಡನೇಯದರಲ್ಲಿ ಭಾರತಾಂಬೆ, ಮೂರನೇಯದರಲ್ಲಿ ಸೀತಾ, ರಾಮ, ಲಕ್ಷ್ಮಣ, ಆಂಜನೇಯ ಹಾಗೂ ನಾಲ್ಕಬನೇಯದರಲ್ಲಿ ಬಿಂದು ಮಾಧವಶರ್ಮ ಅವಧೂತರ ವಿಗ್ರಹಗಳಿವೆ. ಅಪರೂಪದ ಈ ತೇರಿನಲ್ಲಿ ಒಂದು ಪ್ರಧಾನ ಕಳಶ, 33 ಉಪಕಳಶ, 2 ಗುಮ್ಮಟ, 12 ಆನೆಗಳು, 24 ಕಂಬಗಳು, 365 ಗಂಟೆಗಳು ಇವೆ. ಈ ರಥ ಎಳೆಯಲು ಸುಮಾರು 1 ಸಾವಿರ ಜನ ಅವಶ್ಯಕ’ ಎಂದು ಶಿಲ್ಪಿ ರಾಜಶೇಖರ್‌ ಹೆಬ್ಬಾರ್‌ ವಿವರಿಸಿದರು.

ಡಿ.9ರ ಸೋಮವಾರ ಬೆಳಿಗ್ಗೆ 11.30ಕ್ಕೆ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಲೋಕಾರ್ಪಣೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.