ADVERTISEMENT

ಹೊಸದುರ್ಗ: ಆಂಜನೇಯ ಸ್ವಾಮಿ ಹಾಗೂ ಕೆರೆಯಾಗಳಮ್ಮ ದೇವಿಯ ವೈಭವದ ಆರತಿ ಬಾನೋತ್ಸವ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:14 IST
Last Updated 22 ಡಿಸೆಂಬರ್ 2025, 6:14 IST
ಹೊಸದುರ್ಗದ ಹೊನ್ನೇನಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಹಾಗೂ ದೇವಪುರ ಗ್ರಾಮದ ಕೆರೆಯಾಗಳಮ್ಮ ದೇವಿಯನ್ನು ಆಕರ್ಷಕ ಮಂಟಪದಲ್ಲಿ ಕೂರಿಸಿರುವುದು
ಹೊಸದುರ್ಗದ ಹೊನ್ನೇನಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ಹಾಗೂ ದೇವಪುರ ಗ್ರಾಮದ ಕೆರೆಯಾಗಳಮ್ಮ ದೇವಿಯನ್ನು ಆಕರ್ಷಕ ಮಂಟಪದಲ್ಲಿ ಕೂರಿಸಿರುವುದು   

ಹೊಸದುರ್ಗ: ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಶಕ್ತಿದೈವ ಆಂಜನೇಯ ಸ್ವಾಮಿ ಹಾಗೂ ದೇವಪುರದ ಅಧಿದೇವತೆ ಕೆರೆಯಾಗಳಮ್ಮ ದೇವಿಯ ಆರತಿ ಬಾನೋತ್ಸವ ಶನಿವಾರ ನಸುಕಿನಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ದೇವಪುರದ ಕೆರೆಯಾಗಳಮ್ಮ ದೇವಿಗೆ ಸ್ವಾಗತ ಕೋರಲು ಹೊನ್ನೇನಹಳ್ಳಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ದೇವಪುರದಲ್ಲಿ ದೂಳು ಬನೋತ್ಸವ ಮುಗಿಸಿಕೊಂಡ ನಂತರ ಕೆರೆಯಾಗಳಮ್ಮ ದೇವಿ ಶನಿವಾರ ನಸುಕಿನ 2.30ಕ್ಕೆ ಹೊನ್ನೇನಹಳ್ಳಿ ತಲುಪಿತು. 4 ಗಂಟೆಯಿಂದ ಆರತಿ ಹೊತ್ತು ಮಹಿಳೆಯರ ಸಮ್ಮುಖದಲ್ಲಿ ಸೋಮನ (ಚೋಮ) ಕುಣಿತದೊಂದಿಗೆ ಗ್ರಾಮದಲ್ಲಿ ಉತ್ಸವ ಸಾಗಿತು. 600ಕ್ಕೂ ಅಧಿಕ ಮಹಿಳೆಯರು ಆರತಿ ಹೊತ್ತಿದ್ದರು.

ನವಣಕ್ಕಿ ಹಿಟ್ಟಿನ ಆರತಿ: ಹಿಟ್ಟಿನ ಆರತಿ ತಯಾರಿಸಲು 5, 9, 11 ಅಥವಾ 13 ಸೇರಿನಷ್ಟು (ಬೆಸಸಂಖ್ಯೆ) ನವಣಕ್ಕಿಯನ್ನು ಹಿಟ್ಟು ಮಾಡಿಸಲಾಗುತ್ತದೆ. ಅದಕ್ಕೆ ಬೆಲ್ಲ ಸೇರಿಸಿ ಒರಳುಕಲ್ಲಿನಲ್ಲಿ ಕುಟ್ಟಲಾಗುತ್ತದೆ. ಅದರಿಂದ ಆರತಿ ತಯಾರಿಸಿ, ಅಲಂಕಾರ ಮಾಡಿ ಮಹಿಳೆಯರು ತಲೆಮೇಲೆ ಹೊರುತ್ತಾರೆ. ಕಂಕಣ ಭಾಗ್ಯ, ಸಂತಾನ,  ಉದ್ಯೋಗ, ಆರ್ಥಿಕ ಸ್ಥಿತಿ ಸುಧಾರಣೆ, ರೋಗ ನಿವಾರಣೆಗೆ ಹರಕೆ ಹೊರುತ್ತಾರೆ. ಹರಕೆ ಈಡೇರಿದವರು ಕಡ್ಡಾಯವಾಗಿ ಆರತಿ ಹೊರುತ್ತಾರೆ ಎಂದು ಗ್ರಾಮಸ್ಥರೊಬ್ಬರು ಮಾಹಿತಿ ನೀಡಿದರು.

ಶನಿವಾರ ನಸುಕಿನ 4 ಗಂಟೆಗೆ ಆರಂಭವಾದ ಆರತಿ ಬಾನೋತ್ಸವ ಬೆಳಿಗ್ಗೆ 9.30ರವರೆಗೂ ನಡೆಯಿತು. ನರಸೀಪುರ, ಅಕ್ಕಿತಿಮ್ಮಯ್ಯನಹಟ್ಟಿ, ನಾಗತಿಹಳ್ಳಿ, ಕೋಡಿಹಳ್ಳಿ, ದೇವಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ಕೆ ಕೈಜೋಡಿಸಿದರು.

ADVERTISEMENT

ಆರತಿ ಬಾನೋತ್ಸವದ ಅಂಗವಾಗಿ ಆಂಜನೇಯ ಸ್ವಾಮಿಗೆ ಕುಂಕುಮಾರ್ಚನೆ, ಅಭಿಷೇಕ ಪೂಜೆ, ಮಹಾ ಮಂಗಳಾರತಿ ನಡೆಯಿತು. ಶುಕ್ರವಾರ ರಾತ್ರಿಯಿಂದಲೇ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಹೊಸದುರ್ಗದ ಹೊನ್ನೇನಹಳ್ಳಿಯಲ್ಲಿ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆದ ಆರತಿ ಬಾನೋತ್ಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.