ADVERTISEMENT

ಕೂಲಿ ಅರಸಿ ಹೊರಟು ಮಸಣ ಸೇರಿದರು

ತಂದೆ–ತಾಯಿ ಸಾವಿನಿಂದ ಆಘಾತಗೊಂಡ ಮಕ್ಕಳು, ಮೂವರ ಸ್ಥಿತಿ ಗಂಭೀರ

ಕೊಂಡ್ಲಹಳ್ಳಿ ಜಯಪ್ರಕಾಶ
Published 28 ಡಿಸೆಂಬರ್ 2020, 1:57 IST
Last Updated 28 ಡಿಸೆಂಬರ್ 2020, 1:57 IST
ಅಪಘಾತದ ದೃಶ್ಯ
ಅಪಘಾತದ ದೃಶ್ಯ   

ಮೊಳಕಾಲ್ಮುರು: ‘ಕೈ ಹಿಡಿಯದ ಉದ್ಯೋಗಖಾತ್ರಿ ಯೋಜನೆ, ರಾಜ್ಯ ಸಾರಿಗೆ ಸಂಸ್ಥೆ ನಿಯಮಗಳ ಅಸಮರ್ಪಕ ಬಸ್‌ ಸೇವೆ, ಹರಸಾಹಸ ಪಟ್ಟು ಕ್ರೂಸರ್‌ಗಳಲ್ಲಿ ಪಯಣ ಮಾಡಬೇಕಾದ ದುಃಸ್ಥಿತಿ, ಸ್ಥಳೀಯವಾಗಿ ಹೊಟ್ಟೆ ತುಂಬಿಸದ ಕೂಲಿ ವ್ಯವಸ್ಥೆ.

- ಭಾನುವಾರ ಬೆಳಗಿನ ಜಾವ ತಾಲ್ಲೂಕಿನ ಬಿ.ಜಿ.ಕೆರೆ ಬಳಿ ನಡೆದ ಕ್ರೂಸರ್ ಹಾಗೂ ಸಾರಿಗೆ ಬಸ್ ಅಪಘಾತದಲ್ಲಿ ಮೃತಪಟ್ಟ ಸಂಬಂಧಿಕರ ನೋವಿನ ನುಡಿಗಳಿವು.

‘ನಮಗಿರುವುದು ಒಂದು ಎಕರೆ ತುಂಡು ಭೂಮಿ. ಸ್ಥಳೀಯವಾಗಿ ಉದ್ಯೋಗ ಸಿಗುತ್ತಿಲ್ಲ. ಕೆಲಸ ಸಿಕ್ಕರೂ ಮಹಿಳೆಯರಿಗೆ ₹ 60- ₹ 80, ಪುರುಷರಿಗೆ ₹ 100 ನೀಡುತ್ತಾರೆ. ಜೀವನಕ್ಕೆ ಸಾಲುವುದಿಲ್ಲ. ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದರೆ ಒಂದು ವರ್ಷ ನಂತರ ಕೂಲಿ ಕೊಡುತ್ತಾರೆ. ಕೆಲ ಬಾರಿ ಕೂಲಿ ಹಣ ನೀಡಿಲ್ಲ. ಇದರಿಂದ ಬೇಸತ್ತು ನಮ್ಮ ಕಡೆಯ ಬಹುತೇಕರು ಬೆಂಗಳೂರಿಗೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಹೋಗುತ್ತಿದ್ದಾರೆ. ವೃದ್ಧರು ಮಾತ್ರ ಹಳ್ಳಿಗಳಲ್ಲಿ ಉಳಿದುಕೊಂಡಿದ್ದಾರೆ’ ಎಂದು ಮೃತರ ಸಂಬಂಧಿ ದುರ್ಗಪ್ಪ ಹೇಳಿದರು.

ADVERTISEMENT

‘ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಚಿಕ್ಕಮಕ್ಕಳಿಗೂ ಅರ್ಧ ಟಿಕೆಟ್ ಕೊಡಬೇಕು. ಸಣ್ಣಪುಟ್ಟ ಲಗೇಜ್‌ಗೂ ಚಾರ್ಜ್‌ ಕೇಳುತ್ತಾರೆ. ಪರಿಣಾಮ ಇಲ್ಲಿನ ಕಾರ್ಮಿಕರು ಕ್ರೂಸರ್‌ಗಳನ್ನು ಅವಲಂಬಿಸಿದ್ದಾರೆ. ಕ್ರೂಸರ್‌ನವರು ಮನೆ ಬಾಗಿಲಿಗೆ ಬಂದು ಕರೆದುಕೊಂಡು ಹೋಗಿ ಬೆಂಗಳೂರಿನಲ್ಲಿ ಮನೆ
ಬಾಗಿಲಿಗೆ ಬಿಡುತ್ತಾರೆ. ನಿತ್ಯ ಸಾಕಷ್ಟು ಕ್ರೂಸರ್‌ಗಳು ಬೆಂಗಳೂರಿನಿಂದ ರಾಯಚೂರಿಗೆ ಓಡಾಡುತ್ತವೆ’ ಎಂದು ಹೇಳಿದರು.

‘ಟಾಪ್‌ಗಳಲ್ಲಿ ಸಹ ಕೂರಿಸಿಕೊಂಡು ಹೋಗುತ್ತಾರೆ. ಪೊಲೀಸರು ತಡೆಯುತ್ತಾರೆ ಎಂದು ರಾತ್ರಿ ವೇಳೆ ಹೋಗುತ್ತಾರೆ. ಬೆಳಗಾಗುವ ಹೊತ್ತಿಗೆ ಬೆಂಗಳೂರು ಸೇರಬೇಕು ಎಂಬ ಧಾವಂತದಲ್ಲಿ ವೇಗವಾಗಿ ಚಾಲನೆ ಮಾಡುತ್ತಾರೆ. ಅಪಘಾತವಾದಾಗ ಸಾಂತ್ವನ ಹೇಳುವ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು’ ಎಂದು ದುರ್ಗಪ್ಪ ಮನವಿ ಮಾಡಿದರು.

‘ಮೃತಪಟ್ಟ ತಿಮ್ಮಣ್ಣ ಹಾಗೂ ರತ್ನಮ್ಮ ದಂಪತಿಗೆ ಐವರು ಮಕ್ಕಳಿದ್ದಾರೆ. ಅಪಘಾತದಲ್ಲಿ ಅವರ ಮೂವರು ಮಕ್ಕಳು ಗಾಯಗೊಂಡಿದ್ದಾರೆ. ಮನೆಗೆ ಆಧಾರವಾಗಿದ್ದ ತಂದೆ-ತಾಯಿ ಮೃತಪಟ್ಟಿರುವುದರಿಂದ ಸಂಸಾರದ ನೊಗ ಮುರಿದಿದೆ. ಮಕ್ಕಳು ದಿಕ್ಕು ತೋಚದಂತಾಗಿದ್ದಾರೆ’ ಎಂದು ರತ್ನಮ್ಮ ಅವರ ತಂದೆ ದುರುಗಣ್ಣ ಅಳಲು ತೋಡಿಕೊಂಡರು.

ಅವರು ಕೊರೊನಾ ಸಮಯದಲ್ಲಿ ಊರುಗಳಿಗೆ ವಾಪಸ್ಸಾಗಿದ್ದರು. ಗ್ರಾಮ ಪಂಚಾಯಿತಿ ಪ್ರಥಮ ಹಂತದ ಚುನಾವಣೆಯಲ್ಲಿ ಮತದಾನ ಮಾಡಿ ಮರಳಿ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದರು.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಾಕಷ್ಟು ಯೋಜನೆ ರೂಪಿಸಿದ್ದೇವೆ ಎಂದು ಹೇಳುವ ಸರ್ಕಾರಗಳು ಇಲ್ಲಿನ ವಾಸ್ತವ ಅರಿಯಬೇಕು. ಸಾರಿಗೆ ವ್ಯವಸ್ಥೆ ಸುಧಾರಿಸಬೇಕು. ಬಸ್‌ಗಳಲ್ಲಿ ಈ ಹಿಂದೆ ಜಾರಿ ಮಾಡಿದ್ದಂತೆ ಪ್ರಯಾಣ ಸ್ನೇಹಿ ದರ ನಿಗದಿ ಮಾಡಬೇಕು. ಈ ಮೂಲಕ ಭವಿಷ್ಯದ ಅಪಘಾತಗಳನ್ನು ತಪ್ಪಿಸಬಹುದಾಗಿದೆ’ ಎಂದು ಸಂಬಂಧಿಕರು ಮನವಿ ಮಾಡಿದರು.

‘ಕುರಿಗಳಂತೆ ಜನರನ್ನು ತುಂಬುತ್ತಾರೆ’

‘ಕಲ್ಯಾಣ ಕರ್ನಾಟಕ ಜಿಲ್ಲೆಗಳಿಂದ ರಾಜಧಾನಿ ಬೆಂಗಳೂರಿಗೆ ನಿತ್ಯ ಕ್ರೂಸರ್‌ಗಳಲ್ಲಿ ಕುರಿಗಳಂತೆ ಜನರನ್ನು ತುಂಬಿಕೊಂಡು ಹೋಗುವ ವಾಹನಗಳ ಸಂಖ್ಯೆ ಲೆಕ್ಕಕ್ಕಿಲ್ಲ’ ಎಂದು ಮೃತರ ಸಂಬಂಧಿಯೊಬ್ಬರು ಹೇಳಿದರು.

ಪೊಲೀಸರು ನೋಡಿಯೂ ಸುಮ್ಮನಿರಬೇಕಿದೆ. ಕೊರೊನಾ ಸಮಯದಲ್ಲಿ ಲಾಕ್‌ಡೌನ್ ಹೇರಿದಾಗ ಬೆಂಗಳೂರಿನಿಂದ ಸ್ವಗ್ರಾಮಗಳಿಗೆ ಕಾರ್ಮಿಕರು ಸಿಕ್ಕ- ಸಿಕ್ಕ ವಾಹನಗಳಲ್ಲಿ ವಾಪಸ್ಸಾಗಿದ್ದರು. ಈಗ ಮತ್ತೆ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಹಾದು ಹೋಗಿರುವ 150 ‘ಎ’ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿರುವ ಅಪಘಾತಗಳಲ್ಲಿ ಬಹುತೇಕರು ಮೃತಪಟ್ಟಿರುವುದು ಕಲ್ಯಾಣ ಕರ್ನಾಟಕದ ಕಾರ್ಮಿಕರು ಎಂಬುದು ಗಮನಾರ್ಹ.

17 ಜನರಿಗೆ ಗಾಯ

ಬಿ.ಜಿ.ಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 150 ‘ಎ’ನಲ್ಲಿ ಭಾನುವಾರ ನಸುಕಿನಲ್ಲಿ ಬಸ್‌ ಹಾಗೂ ಕ್ರೂಸರ್‌ ನಡುವೆ ಸಂಭವಿಸಿದ ಅಪಘಾತದಲ್ಲಿ 17 ಜನರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ತಿಮ್ಮಯ್ಯ, ಸಾಬಮ್ಮ, ವೆಂಕಟೇಶ, ಬುಡ್ಡಪ್ಪ, ಸಿದ್ದಮ್ಮ, ಮಾರಪ್ಪ, ಅಂಬಿಕಾ, ಅನ್ನಪೂರ್ಣ, ಶ್ರಾವಣಿ, ತಿಮ್ಮಮ್ಮ, ಶಿವಮ್ಮ, ಚೆನ್ನಪ್ಪ, ನಾಗಮ್ಮ, ಜ್ಯೋತಿ ಬಸವ, ಶ್ರೀನಿವಾಸ, ಪರಶುರಾಮ, ಕಾವೇರಿ ಎಂದು ಗುರುತಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಚಳ್ಳಕೆರೆ ಹಾಗೂ ಬಳ್ಳಾರಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ದೇವದುರ್ಗ ಮತ್ತು ಲಿಂಗಸಗೂರು ತಾಲ್ಲೂಕಿಗೆ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.