ADVERTISEMENT

ರೇಷ್ಮೆ ಮಾರುಕಟ್ಟೆಯಲ್ಲಿ ಗೂಂಡಾಗಿರಿ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:57 IST
Last Updated 20 ಜುಲೈ 2024, 15:57 IST
ಮೊಳಕಾಲ್ಮುರಿನ ತಾಲ್ಲೂಕು ಕಚೇರಿ ಎದುರು ಶನಿವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಮೊಳಕಾಲ್ಮುರಿನ ತಾಲ್ಲೂಕು ಕಚೇರಿ ಎದುರು ಶನಿವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು    

ಮೊಳಕಾಲ್ಮುರು: ‘ರಾಜ್ಯದ ಪ್ರಮುಖ ರೇಷ್ಮೆಗೂಡು ಮಾರುಕಟ್ಟೆ ಎಂದು ಗುರುತಿಸಿಕೊಂಡಿರುವ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲ ವ್ಯಾಪಾರಿಗಳು ಗೂಂಡಾಗಿರಿ ಸಂಸ್ಕೃತಿ ತೋರುತ್ತಿದ್ದಾರೆ’ ಎಂದು ಆರೋಪಿಸಿ ಶನಿವಾರ ತಾಲ್ಲೂಕು ಕಚೇರಿ ಎದುರು ರಾಜ್ಯ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

‘ಬೇಡಿಕೆ ಹೆಚ್ಚಳವಾದ ಕಾರಣ ಕೆಲ ತಿಂಗಳುಗಳ ಹಿಂದೆ ಗೂಡಿನ ದರ ₹ 1,000 ದಾಟಿತ್ತು. ಆದರೆ ಈಗ ಮತ್ತೆ ಸಾಕಷ್ಟು ಕುಸಿತವಾಗಿದೆ. ಇದರ ಹಿಂದೆ ದಲ್ಲಾಳಿಗಳ ಕೈವಾಡವಿದೆ. ಈಚೆಗೆ ಮಾರುಕಟ್ಟೆಯಲ್ಲಿ ಚನ್ನಪಟ್ಟಣದಿಂದ ಬಂದಿದ್ದ ರೈತನೊಬ್ಬನಿಗೆ ಹೆಚ್ಚಿನ ದರಕ್ಕೆ ಗೂಡು ಖರೀದಿ ಮಾಡಿದ್ದ ಕಾರಣ ವ್ಯಾಪಾರಿ ಮೇಲೆ ಅಲ್ಲಿನ ಕೆಲ ದಲ್ಲಾಳಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ’ ಎಂದು ದೂರಿದರು.

‘ಇದರಿಂದ ರೈತರಿಗೆ ಮುಂದಿನ ದಿನಗಳಲ್ಲಿ ನ್ಯಾಯಯುತ ದರ ಸಿಗುವ ಅನುಮಾನವಿದೆ. ಕೆಲ ರಾಜಕಾರಣಿಗಳು, ರೌಡಿಗಳ ಪಾತ್ರ ಮಾರುಕಟ್ಟೆಯಲ್ಲಿ ಇರುವ ಅನುಮಾನವಿದೆ. ಆದ್ದರಿಂದ ಹಲ್ಲೆ ಮಾಡಿರುವವ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರುವ ವ್ಯಾಪಾರಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು. ದರ ನೀಡಿಕೆಯಲ್ಲಿ ಆಗುತ್ತಿರುವ ಎಲ್ಲ ಬಗೆಯ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.‌ಮಂಜುನಾಥ್‌, ಕಾರ್ಯದರ್ಶಿ ಈರಣ್ಣ, ದಾನಸೂರನಾಯಕ, ಪಾಪಯ್ಯ, ಸತ್ಯಪ್ಪ, ಕನಕ ಶಿವಮೂರ್ತಿ, ಚಂದ್ರಣ್ಣ, ನಾಗೇಶ್‌, ಸಣ್ಣಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.