ಹಿರಿಯೂರು: ‘ಬುಡಕಟ್ಟು ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟಪಂಗಡಕ್ಕೆ ಸೇರಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸಬೇಕಾಗುತ್ತದೆ’ ಎಂದು ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ಹಾಗೂ ಬಿಬಿಎಂಪಿ ರಾಜಣ್ಣ ಎಚ್ಚರಿಸಿದರು.
ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಸಮೀಪ ಭಾನುವಾರ ಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಪಕ್ಷಾತೀತ ಕಾಡುಗೊಲ್ಲ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಿ ದಶಕಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೂ ಆಡಳಿತ ನಡೆಸಿದವರು ನಮ್ಮನ್ನು ಮತಬ್ಯಾಂಕ್ ಆಗಿ ಬಳಸಿಕೊಂಡರೇ ಹೊರತು ಬೇಡಿಕೆ ಈಡೇರಿಸಲಿಲ್ಲ. ಹೀಗಾಗಿ ಚುನಾವಣೆ ಬಹಿಷ್ಕಾರದಂತಹ ದಿಟ್ಟ ತೀರ್ಮಾನ ಕೈಗೊಳ್ಳಲು ಚಿಂತನೆ ನಡೆಸಿದ್ದೇವೆ. ಎಸ್ಟಿ ಮೀಸಲಾತಿಗಾಗಿ ರಾಜಕೀಯ ವ್ಯತ್ಯಾಸಗಳನ್ನು ಬದಿಗಿಟ್ಟು ಹೋರಾಟ ನಡೆಸೋಣ. ರಾಜಕೀಯ ಕಾರಣಕ್ಕಾಗಿ ಈ ಹೋರಾಟ ನಡೆಸುತ್ತಿಲ್ಲ. ನಮ್ಮ ಹಕ್ಕನ್ನು ಪಡೆಯಲು ಅನಿವಾರ್ಯವಾಗಿ ಬೀದಿಗೆ ಇಳಿಯಬೇಕಾಗಿದೆ’ ಎಂದುಹೇಳಿದರು.
‘ಬಿಜೆಪಿ ಸರ್ಕಾರದಲ್ಲಿ ಕಾಡುಗೊಲ್ಲರೊಬ್ಬರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಬೇಕು. ಜೊತೆಗೆ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಕಾಡುಗೊಲ್ಲ ಸಂಘಟನೆಗಳು ರಾಜಣ್ಣ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಬೇಕು. ಶೀಘ್ರದಲ್ಲಿಯೇ ದಿನಾಂಕ ನಿಗದಿ ಮಾಡಿ ಸಿದ್ದೇಶ್ ಯಾದವ್ ನೇತೃತ್ವದಲ್ಲಿಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ನಮ್ಮ ಹಕ್ಕು ಮಂಡಿಸೋಣ’ ಎಂದು ಮುಖಂಡರು ಸಲಹೆ ನೀಡಿದರು.
ಮಾಗಡಿ ಜಯರಾಂ ಮಾತನಾಡಿ, ‘2013ರಿಂದ ಕಾಂಗ್ರೆಸ್ ಪಕ್ಷದಲ್ಲಿರುವ ನಾನು ಪ್ರಬಲ ಆಕಾಂಕ್ಷಿ ಆಗಿದ್ದೇನೆ. ನನಗೆ ಟಿಕೆಟ್ ನೀಡಿದರೆ ಸಮುದಾಯದವರು ಬೆಂಬಲಿಸಲಿದ್ದಾರೆ’ಎಂದು ಹೇಳಿದರು.
ದೇವರಾಜ್, ಪ್ರಭುಯಾದವ್, ಕೃಷ್ಣಪೂಜಾರಿ, ರಂಗಸ್ವಾಮಿ, ಜನಾರ್ದನ್, ರಂಗಯ್ಯ, ಹರೀಶ್, ತಿಮ್ಮಯ್ಯ, ವಿದ್ಯಾಧರ, ಮಂಜು, ನವೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.